ಮಡಿಕೇರಿ, ಮಾ. 6: ತಲಚೇರಿ-ಮೈಸೂರು ರೈಲ್ವೆ ಯೋಜನೆ ಜಾರಿಗೊಳಿಸಬಾರದೆಂದು ದೆಹಲಿಯಲ್ಲಿ ಸಂಬಂಧಿತ ಸಚಿವರನ್ನು ಒತ್ತಾಯಿಸಿರುವ ಕೊಡಗು ಏಕೀಕರಣ ರಂಗದ ಪ್ರಮುಖರು ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಧೀರ್ಘ ಮನವಿ ಸಲ್ಲಿಸಿದ್ದು, ಅದರಲ್ಲಿ ಸೂಕ್ಷ್ಮ ಪರಿಸರ ತಾಣ ಯೋಜನೆಯನ್ನು ಯಾವದೇ ಬದಲಾವಣೆ ಮಾಡದೆ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.ತಾ. 6ರಂದು ದೆಹಲಿಯಲ್ಲಿ ಸಲ್ಲಿಸಿರುವ ಮನವಿಯಲ್ಲಿ ಸಹಿ ಮಾಡಿರುವ ವೈಲ್ಡ್‍ಲೈಫ್ ಫಸ್ಟ್ ಹಾಗೂ ಕೊಡಗು ಏಕೀಕರಣ ರಂಗದ ಕೆ.ಎಂ. ಚಿಣ್ಣಪ್ಪ, ಪ್ರವೀಣ್ ಭಾರ್ಗವ್, ಹೆಚ್.ಎನ್.ಎ. ಪ್ರಸಾದ್ ಹಾಗೂ ತಮ್ಮು ಪೂವಯ್ಯ ಇವರುಗಳು, ಕೇಂದ್ರ ಸರ್ಕಾರ 56825 ಚದರ ಕಿ.ಮೀ. ಪ್ರದೇಶವನ್ನು 6 ರಾಜ್ಯಗಳಲ್ಲಿ ಪಶ್ಚಿಮಘಟ್ಟ ಸೂಕ್ಷ್ಮ ಪರಿಸರ ತಾಣವೆಂದು ಗುರುತಿಸಿದ್ದು, ಯಾವದೇ ಬದಲಾವಣೆ ಮಾಡದೆ 60 ದಿನಗಳ ಅವಧಿ ಪೂರ್ಣಗೊಂಡ ಬಳಿಕ ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.

ದೇಶದಲ್ಲಿ ಪ್ರಮುಖ ನದಿಗಳಾಗಿರುವ ಕೃಷ್ಣ, ಗೋದಾವರಿ ಹಾಗೂ ಕಾವೇರಿ ನದಿಗಳು ಪಶ್ಚಿಮ ಘಟ್ಟದಲ್ಲೇ ಹುಟ್ಟುತ್ತಿದ್ದು, ಮಳೆ, ಸಸ್ಯ ಹಾಗೂ ಪ್ರಾಣಿ ಸಂಕುಲದ ಉಳಿಯುವಿಕೆಗೆ ಪಶ್ಚಿಮ ಘಟ್ಟದ ರಕ್ಷಣೆ ಆಗಬೇಕಿದೆ ಎಂದು ಅವರುಗಳು ಬಣ್ಣಿಸಿದ್ದು, ಆಹಾರ ಉತ್ಪಾದನೆ, ಔಷಧೀಯ ಸಸ್ಯಕಾಶಿಗಳ ಹಿನ್ನೆಲೆಯಲ್ಲಿಯೂ ಪಶ್ಚಿಮಘಟ್ಟವನ್ನು ಉಳಿಸಬೇಕಿದ್ದು, ಈ ಎಲ್ಲ ಕಾರಣಗಳಿಂದ ತಲಚೇರಿ - ಮೈಸೂರು ರೈಲ್ವೆ ಯೋಜನೆಯನ್ನು ಕೈಬಿಡಬೇಕೆಂದು ಮನವಿ ಸಲ್ಲಿಸಿದ್ದಾರೆ.