ಮಡಿಕೇರಿ, ಮಾ. 6: ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಆತಂಕಕಾರಿಯ ರೀತಿಯಲ್ಲಿ ಸಂಚಲನ ಮೂಡಿಸಿರುವ ಉದ್ದೇಶಿತ ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ಮೈಸೂರು - ತಲಚೇರಿ ನಡುವಿನ ರೈಲ್ವೆ ಮಾರ್ಗದ ಪ್ರಸ್ತಾಪಕ್ಕೆ ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವದಿಲ್ಲ. ಇಂತಹ ಪ್ರಸ್ತಾಪವನ್ನು ಕೇಂದ್ರ ಸರಕಾರ ಪರಿಗಣಿಸುವದಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಖಚಿತ ಭರವಸೆ ನೀಡಿದ್ದಾರೆ.ರೈಲು ಮಾರ್ಗಕ್ಕೆ ಸಂಬಂಧಿಸಿ ದಂತೆ ಕೊಡಗು ಏಕೀಕರಣರಂಗ ಹಾಗೂ ವೈಲ್ಡ್ ಲೈಫ್ ಫಸ್ಟ್‍ನ ಪದಾಧಿಕಾರಿಗಳ ನಿಯೋಗ ತಾ. 6 ರಂದು ನವದೆಹಲಿಯ ರೈಲ್ವೆ ಭವನದಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಚರ್ಚಿಸಿ ಈ ಕುರಿತು ಸಚಿವರ ಗಮನ ಸೆಳೆದ ಸಂದರ್ಭ ಸಚಿವರು ಉದ್ದೇಶಿತ ಪ್ರಸ್ತಾಪಕ್ಕೆ ಅನುಮತಿ ನೀಡುವದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉದ್ದೇಶಿತ ಮೈಸೂರು - ತಲಚೇರಿ ನಡುವಿನ ರೈಲ್ವೆ ಮಾರ್ಗ ಕೊಡಗು ಜಿಲ್ಲೆಯ ಸೂಕ್ಷ್ಮ ಪರಿಸರ ತಾಣದ ನಡುವೆ ಹಾದು ಹೋಗಲಿದ್ದು,
(ಮೊದಲ ಪುಟದಿಂದ) ಇದು ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಕುರಿತು ನಿಯೋಗದಲ್ಲಿದ್ದ ಪದಾಧಿಕಾರಿಗಳು ಸಚಿವರ ಗಮನ ಸೆಳೆದಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ರೈಲ್ವೆ ಸಚಿವರು ನೂತನ ರೈಲು ಮಾರ್ಗದ ಅನುಷ್ಠಾನದಿಂದ ಪರಿಸರ ಮತ್ತು ವನ್ಯ ಜೀವಿಗಳ ಮೇಲಾಗುವ ಪರಿಣಾಮಗಳ ಸ್ಪಷ್ಟ ಅರಿವು ಇದೆ.
ಈ ಪ್ರಸ್ತಾವನೆಯಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಮನಗಂಡು 1960ರಿಂದಲೇ ಇದನ್ನು ತಡೆಹಿಡಿಯಲಾಗಿದೆ. ಜಲಮೂಲಗಳ ಸಂರಕ್ಷಣೆಯ ದೃಷ್ಟಿಯಿಂದ ಮತ್ತು ಅತೀ ಹೆಚ್ಚು ವನ್ಯಜೀವಿ ಸಾಂದ್ರತೆ ಇರುವ ಈ ಪ್ರದೇಶದಲ್ಲಿ ರೈಲ್ವೆ ಮಾರ್ಗವನ್ನು ರೂಪಿಸಿದಲ್ಲಿ ಈಶಾನ್ಯ ಭಾರತದಂತೆ ಆನೆಗಳ ಸಂತತಿಗೆ ಅಪಾಯವುಂಟಾಗುವ ಸಾಧ್ಯತೆ ಇರುವದರಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವದಿಲ್ಲ ಎಂದು ಖಚಿತ ಭರವಸೆ ನೀಡಿದ್ದಾರೆ.
ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಅವರೊಂದಿಗೆ ಚರ್ಚಿಸಿದ್ದ ನಿಯೋಗ ಅನಂತಕುಮಾರ್ ಅವರ ಸ್ಪಂದನ ಹಾಗೂ ಸಹಕಾರದೊಂದಿಗೆ ದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿತ್ತು. ಕೊಡಗು ಜಿಲ್ಲೆಯ ಅರಣ್ಯ ಪ್ರದೇಶ ದಕ್ಷಿಣ ಭಾರತದ ಜೀವನದಿ ಕಾವೇರಿಯ ಪ್ರಮುಖ ಜಲಮೂಲವಾಗಿದೆ. ಅಲ್ಲದೆ ಈ ಪ್ರದೇಶ ಏಷ್ಯಾದ ಕಾಡಾನೆಗಳ ಅಳಿದುಳಿದ ಆವಾಸ ಸ್ಥಾನ ಎಂಬದನ್ನು ಹಾಗೂ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕೇರಳದ ನಡುವೆ ಇರುವ ಸಮರ್ಪಕ ರಸ್ತೆ ಸಂಪರ್ಕ ಜಾಲದ ಬಗ್ಗೆ ಮತ್ತು ಮೈಸೂರು - ಹಾಸನ - ಮಂಗಳೂರು - ತಲಚೇರಿ ನಡುವಿನ ರೈಲ್ವೆ ಮಾರ್ಗದ ವಸ್ತುಸ್ಥಿತಿಯ ಬಗ್ಗೆ ನಿಯೋಗ ಸಚಿವರ ಗಮನ ಸೆಳೆದಿತ್ತು.
ನಿಯೋಗದ ನೇತೃತ್ವದನ್ನು ವೈಲ್ಡ್ ಲೈಫ್ ಫಸ್ಟ್ ಸಂಘಟನೆಯ ಪ್ರಮುಖ ಕೆ.ಎಂ. ಚಿಣ್ಣಪ್ಪ ವಹಿಸಿದ್ದರು. ನಿಯೋಗದಲ್ಲಿ ಕೊಡಗು ಏಕೀಕರಣ ರಂಗದ ಪ್ರಮುಖರಾದ ಎ.ಎ. ತಮ್ಮುಪೂವಯ್ಯ, ವೈಲ್ಡ್‍ಲೈಫ್ ಫಸ್ಟ್ ಸಂಘಟನೆಯ ಪ್ರವೀಣ್ ಭಾರ್ಗವ್ ಮತ್ತು ಹೆಚ್.ಎನ್.ಎ. ಪ್ರಸಾದ್ ಪಾಲ್ಗೊಂಡಿದ್ದರು.