ಮಡಿಕೇರಿ, ಮಾ. 6: ಕೊಡಗು ಜಿಲ್ಲೆಯ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಜರುಗಿದ ಹಲವು ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ.
ಶಿಕ್ಷಕರಿಗೆ ಬೀಳ್ಕೊಡುಗೆ
ಸುಂಟಿಕೊಪ್ಪ: ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗಳ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಮೂವರು ಶಿಕ್ಷಕರನ್ನು ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಿಕ್ಷಕ ವರ್ಗದವರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಟ್ಟರು.
ಕೊಡಗರಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಕೆ.ಜೆ. ಗೋಪಾಲ, ಮತ್ತಿಕಾಡು ಶಾಲೆಯ ಮೆಟಿಲ್ಡಾ ಪಾಯಸ್ ಮತ್ತು ಸುಂಟಿಕೊಪ್ಪ ಶಾಲೆಯ ಶಶಿಕುಮಾರಿ ಅವರು ನಿವೃತ್ತ ಹೊಂದಿದ್ದು ಅವರನ್ನು ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್ ಅವರು ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭ ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಪದವೀಧರರ ಶಿಕ್ಷಕರ ಸಂಘದ ಅಧ್ಯಕ್ಷ ಸತ್ಯನಾರಾಯಣ್, ಮಾದಾಪುರ ಕ್ಲಷ್ಟರ್ ಸಿ.ಆರ್.ಪಿ. ವಸಂತಕುಮಾರ್, ತಾಲೂಕು ಐ.ಈ.ಆರ್.ಟಿ. ವೆಂಕಟೇಶ್, ಕಾನ್‍ಬೈಲ್ ಶಾಲಾ ಮುಖ್ಯ ಶಿಕ್ಷಕ ಚೆನ್ನಪ್ಪ, ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗೀತಾ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸೌಭಾಗ್ಯ ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದ್ದೆಹಳ್ಳ ಶಾಲೆಯ ಮೀನಾಕ್ಷಿ ವಹಿಸಿದ್ದರು.
ವಿಜ್ಞಾನ ದಿನಾಚರಣೆ
ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಮದ್ರಾಸ್ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದ ವಿಜ್ಞಾನಿ ಡಾ. ಇಂದಿರಾ ಕಲ್ಯಾಣ ಸುಂದರಂ ವಿಜ್ಞಾನದ ಮಹತ್ವದ ಬಗ್ಗೆ ಮಾತನಾಡಿದರು.
ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕೆ.ಜಿ. ಉತ್ತಪ್ಪ, ಪೊನ್ನಂಪೇಟೆ ಕೂರ್ಗ್ ಇನ್ಸ್ಟಿಟ್ಯೂಟ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ರೋಹಿಣಿ ತಿಮ್ಮಯ್ಯ , ಪ್ರೊ. ಕುಸುಮಾಧರ್, ಡಾ. ನರೇಶ್, ಸಿ.ಎಲ್. ನಿಶಾ ಮುಂತಾದವರು ಉಪಸ್ಥಿತರಿದ್ದರು.
ಸೈಂಟ್ ಆನ್ಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ
ವೀರಾಜಪೇಟೆ: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರದ ಫೆಸ್ಟ್‍ನಲ್ಲಿ ವೀರಾಜಪೇಟೆ ಸೈಂಟ್ ಆ್ಯನ್ಸ್ ಪದವಿ ಕಾಲೇಜಿನ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಫೆಸ್ಟ್‍ನಲ್ಲಿ ಒಟ್ಟು 9 ಜನ ವಿದ್ಯಾರ್ಥಿಗಳ ತಂಡವು ಭಾಗವಹಿಸಿತು.
ರಾಷ್ಟ್ರಮಟ್ಟದ ಪ್ರಶಸ್ತಿ
ಗೋಣಿಕೊಪ್ಪ ವರದಿ: ಕಾಲ್ಸ್ ಶಾಲೆಯ ವಿದ್ಯಾರ್ಥಿನಿ ಮೇವಡ ಆಲಿಯಾ ಚೋಂದಮ್ಮ ‘ಮೈ ಲೈಫ್ ಏಸ್ ಎ ಟ್ರೀ’ ಎಂಬ ಅಂಕಣದಲ್ಲಿ ಪ್ರಕೃತಿಯ ಬಗ್ಗೆ ಚಿತ್ರಿಸಿರುವ ವಿಷಯ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದೆ.
ಪ್ರಸಕ್ತ 6 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಪರಿಸರ ಕಾಳಜಿಯ ಬಗ್ಗೆ ಬೆಂಗಳೂರಿನ ರಾಬಿನ್ ಏಜ್ ಪತ್ರಿಕೆಯಲ್ಲಿ ಈ ಬಗ್ಗೆ ಅಂಕಣ ಬರೆದಿದ್ದರು. ಪಶ್ಚಿಮಘಟ್ಟ ಪ್ರದೇಶಗಳು ರೈಲ್ವೆ ಯೋಜನೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯ ಮೇಲೆ ಪರಿಣಾಮ ಬೀರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಇದರಂತೆ ಕಾವೇರಿ ನದಿ ಸೇರಿದಂತೆ ಹಲವು ನದಿಗಳು ಕೊಳಕಾಗುತ್ತಿರುವದು, ಮರವನ್ನು ಕಡಿದು ಬರಿದು ಮಾಡುತ್ತಿರುವದು. ಪಶ್ಚಿಮ ಘಟ್ಟಗಳಲ್ಲಿ ಹೈಟೆನ್ಷನ್ ವಿದ್ಯುತ್ ಮಾರ್ಗದಿಂದ ಆಗುತ್ತಿರುವ ದುಷ್ಟರಿಣಾಮಗಳ ಬಗ್ಗೆ ಸೇರಿದಂತೆ ಹಲವು ವಿಷಯಗಳ ಕುರಿತು ಚಿತ್ರಿಸಿ ಗಮನ ಸೆಳೆದಿದ್ದಳು.
ಆಲಿಯಾ ಚೋಂದಮ್ಮ ಕಾಕೋಟುಪರಂಬು ಗ್ರಾಮದ ಮೇವಡ ಐಯ್ಯಣ್ಣ, ಮೀನಾಕ್ಷಿ ದಂಪತಿಗಳ ಪುತ್ರಿ.ರಸಪ್ರಶ್ನೆ: ಮೊರಾರ್ಜಿ ಶಾಲೆ ಪ್ರಥಮ
ಕೂಡಿಗೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್, ರೋಟರಿ ಸಂಸ್ಥೆ ಸಹಭಾಗಿತ್ವದಲ್ಲಿ ಸೋಮವಾರಪೇಟೆಯ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ವಿಜ್ಞಾನ ಮೇಳ ಕಾರ್ಯಕ್ರಮದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಪುರುಷೋತ್ತಮ ಮತ್ತು ದೀಕ್ಷಿತ್ ವೈ.ಪಿ. ಪ್ರಥಮ ಸ್ಥಾನ ಗಳಿಸಿದ್ದಾರೆ. ವಿಜ್ಞಾನ ಪ್ರಯೋಗ ಸ್ಪರ್ಧೆಯಲ್ಲಿಯೂ ಕೂಡ ಪ್ರಣಿತ್ ಮತ್ತು ಅಭಿಷೇಕ್ ಪ್ರಥಮ ಸ್ಥಾನಗಳಿಸಿದ್ದಾರೆ. ಶಾಲೆಯ ವಿಜ್ಞಾನ ಶಿಕ್ಷಕ ಚಿದಂಬರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ಕಾವೇರಿ ಶಾಲೆಯಲ್ಲಿ ಕಲಾ ಉತ್ಸವ
ವೀರಾಜಪೇಟೆ: ವೀರಾಜಪೇಟೆ ಕಾವೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆವರಣದಲ್ಲಿ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಬಹುಮುಖ ಪ್ರತಿಭೆಗಳು ಹಾಗೂ ವಿವಿಧ ಕಲೆಗಳನ್ನು ಅನಾವರಣ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಎ. ಪೂವಣ್ಣ ವಿದ್ಯಾರ್ಥಿಗಳು ಎಂದಿಗೂ ಕಲಿಕೆಯನ್ನು ಹೊರೆ ಎಂದು ಭಾವಿಸದೆ, ಮೌಲ್ಯವರ್ಧಿತ ಶಿಕ್ಷಣಕ್ಕೆ ಒತ್ತು ನೀಡಿ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಯನ್ನಾಗಿ ಮಾಡುವಂತಾಗಬೇಕು ಎಂದರು.
ಕಾವೇರಿ ಶಾಲೆಯ ಮುಖ್ಯಸ್ಥೆ ಕಾವೇರಿ ಮುತ್ತಣ್ಣ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಕಲಿಕೆಯೊಂದಿಗೆ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಚಾಪು ಮೂಡಿಸುವಂತ ವ್ಯಕ್ತಿಗಳಾಗಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಡಳಿತ ಮಂಡಳಿಯ ಅಧ್ಯಕ್ಷ ಮುಕ್ಕಾಟಿರ ಮುತ್ತಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ವಿನೋದ್ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನೆನೆಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಪೋಷಕರು - ಅಧ್ಯಾಪಕರ ಸಭೆ
ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಪದವಿ ಕಾಲೇಜು ವಿದ್ಯಾರ್ಥಿಗಳ ಪೋಷಕ ಹಾಗೂ ಅಧ್ಯಾಪಕರ ಸಭೆಯನ್ನು ನಡೆಸಲಾಯಿತು. ಈ ಸಂದರ್ಭ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಪ್ರೊ. ಬಿ.ಎಂ. ಸರಸ್ವತಿ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಬೇರೆ ಮಕ್ಕಳಿಗೆ ಹೋಲಿಸಿ ಮಾತನಾಡಿದರೆ ಅದು ಮಕ್ಕಳ ಮನಸ್ಸಿನಲ್ಲಿ ಕೀಳರಿಮೆ ಮೂಡಲು ಕಾರಣವಾಗುತ್ತದೆ. ಆದ್ದರಿಂದ ತಮ್ಮ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸುವ ಮೂಲಕ ಅವರ ಬೆಳವಣಿಗೆಗೆ ಕಾರಣರಾಗಬೇಕು ಎಂದರು.
ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಟಿ. ಸಂತೋಷ್, ಎನ್.ಸಿ.ಸಿ. ಅಧಿಕಾರಿ ಕ್ಯಾಪ್ಟನ್ ಬ್ರೈಟ ಕುಮಾರ್, ಎನ್.ಎಸ್.ಎಸ್. ಅಧಿಕಾರಿ ಎಂ.ಎನ್. ವನಿತ್‍ಕುಮಾರ್ ಇವರುಗಳನ್ನು ಸನ್ಮಾನಿಸಲಾಯಿತು.
ಪೋಷಕ ಹಾಗೂ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಿ.ಸಿ. ಕಾಳಯ್ಯ, ಕಾರ್ಯದರ್ಶಿ ಚೈತ್ರಾ, ಜಂಟಿ ಕಾರ್ಯದರ್ಶಿ ಶಮ್ಮಿ ಉತ್ತಪ್ಪ ಹಾಗೂ ಗಣೇಶ್ ನಾಯ್ಡು, ಸಂಚಾಲಕಿ ಎನ್.ಪಿ. ರೀತಾ, ಉಪ ಪ್ರಾಂಶುಪಾಲೆ ಪ್ರೊ. ಎಂ.ಡಿ. ಅಕ್ಕಮ್ಮ ಉಪಸ್ಥಿತರಿದ್ದರು.
ಜಿಲ್ಲೆಯ ವಿದ್ಯಾರ್ಥಿಗೆ ಚಿನ್ನದ ಪದಕ
ಒಡೆಯನಪುರ: ಸಮೀಪದ ನಂದಿಗುಂದ ಗ್ರಾಮದ ನಿವಾಸಿ ಎನ್.ಎಸ್. ಜಗದೀಶ್ ಮತ್ತು ಪ್ರೇಮ ದಂಪತಿ ಪುತ್ರ ಎನ್.ಜೆ. ಮನೋಜ್ ಕುಮಾರ್ ಎಂ.ಟೆಕ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್‍ಗಳಿಸಿ ಚಿನ್ನದ ಪದಕ ಪಡೆದಿದ್ದಾನೆ.
ಈತ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಎಂಟೆಕ್‍ನಲ್ಲಿ ಹೈವೆ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಯಾಗಿದ್ದು, ಇತ್ತೀಚೆಗೆ ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ನಡೆದ 17ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯಿವಾಲ ಅವರು ಮನೋಜ್ ಕುಮಾರ್‍ಗೆ ಪ್ರಶಸ್ತಿ ಮತ್ತು ಚಿನ್ನದ ಪದಕ ಪ್ರದಾನ ಮಾಡಿದರು.ಜಿಲ್ಲಾಮಟ್ಟದ ವಿಚಾರ ಮಂಡನೆ
ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜಿನ ಎಂ.ಕಾಂ ವಿಭಾಗದ ವತಿಯಿಂದ “ಕೊಡಗಿನ ಮಳೆಗಾಲದ ಗತವೈಭವವನ್ನು ಮರುಕಳಿಸಲು ಕೈಗೊಳ್ಳಬಹುದಾದ ಕಾರ್ಯ ಸಾಧ್ಯ ಕ್ರಮಗಳು” ಎಂಬ ವಿಷಯದ ಕುರಿತು ಜಿಲ್ಲಾಮಟ್ಟದ ವಿಚಾರ ಮಂಡನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ 15 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿಷಯ ಮಂಡಿಸಿದರು. ಬೆಸ್ಟ್ ಪೇಪರ್ ಪ್ರಶಸ್ತಿಯನ್ನು ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಪಾಯಲ್ ಬೊಳ್ಳಮ್ಮ ಹಾಗೂ ರಿಯಾ ಪಡೆದುಕೊಂಡರು. ಬೆಸ್ಟ್ ಪ್ರೆಸೆಂಟೇಷನ್ ಪ್ರಶಸ್ತಿಯನ್ನು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಮಹಮದ್ ಜಿ. ಶಾನ್ ಪಡೆದುಕೊಂಡರು. ಕಾಲೇಜು ಆವರಣದಲ್ಲಿ ಚಿಕ್ಕದಾದ ಕುಟೀರವನ್ನು ನಿರ್ಮಿಸಿ ಅದರಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳ ಪ್ರದರ್ಶನ ಏರ್ಪಡಿಸಿ ಮಳೆಗಾಲದ ಅನುಭವವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಮಾಡಲಾಗಿತ್ತು.
ಮುಖ್ಯ ಅತಿಥಿಗಳಾಗಿ ಕೊಡಗು ದಂತ ವಿದ್ಯಾಲಯದ ಪ್ರಾಂಶುಪಾಲ ಡಾ. ಕೆ.ಪಿ. ಪೊನ್ನಪ್ಪ ಹಾಗೂ ಕೊಡಗು ವಾಟರ್ ಸ್ಪೋಟ್ರ್ಸ್ ಮತ್ತು ಎಡ್ವೆಂಚರ್‍ನ ಮಾಲೀಕರು ಹಾಗೂ ವೈಲ್ಡ್ ಲೈಫ್ ವಾರ್ಡನ್ ಆಗಿರುವ ಕುಂಞಂಗಡ ಬೋಸ್ ಮಾದಪ್ಪ, ಕಾವೇರಿ ಕಾಲೇಜಿನ ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಕೆ.ಎಸ್. ತುಳಸಿ ಹಾಜರಿದ್ದರು. ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಲೆಫ್ಟಿನೆಂಟ್ ಬೀನಾ, ಉಪನ್ಯಾಸಕರಾದ ಕೆ.ಜಿ. ಮುದ್ದಪ್ಪ, ಪಿ.ಆರ್. ನಿತ್ಯ ಉಪಸ್ಥಿತರಿದ್ದರು.
ವಾರ್ಷಿಕ ವಿಶೇಷ ಶಿಬಿರ
ಸೋಮವಾರಪೇಟೆ: ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ವತಿಯಿಂದ ಸಮೀಪದ ನೇರುಗಳಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ “ವಿದ್ಯಾರ್ಥಿ ಮತ್ತು ಕಾನೂನು” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಕೀಲ ಹೆಚ್.ಎಸ್. ಚಂದ್ರಶೇಖರ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ರಕ್ಷಣೆ ಮತ್ತು ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ವೇದಿಕೆಯಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಬಿ.ಜಿ. ಆನಂದ್, ನೇರುಗಳಲೆ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಜಿತ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕೆ.ಎಂ. ದರ್ಶನ್, ಜೆ.ಸಿ. ಸಮೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.
ವಿಜ್ಞಾನ ವಸ್ತು ಪ್ರದರ್ಶನ
ಸೋಮವಾರಪೇಟೆ: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಸಮೀಪದ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಿಂದ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು.
ಶಾಲಾ ವಿದ್ಯಾರ್ಥಿಗಳು 15 ತಂಡಗಳನ್ನಾಗಿ ರಚಿಸಿಕೊಂಡು ಪ್ರಯೋಗಗಳು ಹಾಗೂ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎರಡು ಅತ್ಯುತ್ತಮ ತಂಡಗಳಿಗೆ ವಿಜ್ಞಾನ ಸಂಘದ ವತಿಯಿಂದ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಪೌಢಶಾಲೆಯ ಪ್ರಬಾರ ಮುಖ್ಯ ಶಿಕ್ಷಕ ಯಶ್‍ವಂತ್ ಹಾಗೂ ಸಹ ಶಿಕ್ಷಕರು ಹಾಜರಿದ್ದರು.
ಮಂಗಳೂರು ವಿ.ವಿ.ಯಲ್ಲಿ ಪ್ರಥಮ ರ್ಯಾಂಕ್
ಮಡಿಕೇರಿ: ಮಂಗಳೂರು ವಿಶ್ವವಿದ್ಯಾನಿಲಯದ ಪ್ರವಾಸೋದ್ಯಮ ಮತ್ತು ಆಡಳಿತ ವಿಭಾಗದಲ್ಲಿ ಹೊಸ್ಕೇರಿ ಗ್ರಾಮದ ಕೆ.ಬಿ. ಶೋಭಾ ವಿ.ವಿ.ಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಕೆ.ಬಿ. ಶೋಭಾ ಅವರಿಗೆ ಪ್ರಥಮ ರ್ಯಾಂಕ್ ಪ್ರದಾನ ಮಾಡಲಾಯಿತು. ಶೋಭಾ ಮಡಿಕೇರಿ ತಾಲೂಕಿನ ಹೊಸ್ಕೇರಿ ಗ್ರಾಮದ ದಿ. ಕೆ.ಎನ್. ಬಾಲಚಂದ್ರ ಮತ್ತು ಮಂಗಳಗೌರಿ ದಂಪತಿಯ ಪುತ್ರಿ.