ಸಿದ್ದಾಪುರ, ಮಾ. 6: ನೆಲ್ಲಿಹುದಿಕೇರಿ ಗ್ರಾಮದಲ್ಲಿ ಪ್ರಖ್ಯಾತವಾಗಿರುವ ವಿಂಟೇಜ್ ಕಾರ್‍ಗಳ ಸಂಗ್ರಹಾಲಯ ಪ್ರವಾಸಿಗರನ್ನು ಅಕರ್ಷಿಸುತ್ತಿದೆ.

ನೆಲ್ಲಿಹುದಿಕೇರಿಯ ಪಟ್ಟಣದಿಂದ ಅನತಿ ದೂರದಲ್ಲಿರುವ ಪಿ.ಸಿ. ಅಹಮ್ಮದ್ ಕುಟ್ಟಿ ಹಾಜಿ ಎಂಬವರಿಗೆ ಸೇರಿದ ಕಾಫಿ ತೋಟದ ಮನೆ ಸಮೀಪದಲ್ಲಿರುವ ವಿಂಟೇಜ್ ಕಾರುಗಳ ಪ್ರದರ್ಶನಾಲಯದಲ್ಲಿ ನೂರಾರು ಕಾರುಗಳು ನೋಡುಗರ ಕಣ್ಮನ ಸೆಳೆಯುತ್ತಿದೆ. ತಮ್ಮ ತೋಟದ ಮನೆಯ ಸಮೀಪದಲ್ಲಿ ಬೃಹತ್ ಶೆಡ್ ನಿರ್ಮಿಸಿರುವ ಅಹಮ್ಮದ್ ಕುಟ್ಟಿ ಹಾಜಿ ಅವರು, ಹಳೆಯ ಕಾರುಗಳನ್ನು ಸುರಕ್ಷಿತವಾಗಿ ಶೆಡ್‍ಗಳಲ್ಲಿ ಇರಿಸಿದ್ದಾರೆ.

ಬ್ರಿಟೀಷರ ಕಾಲದಲ್ಲಿ ಉಪಯೊಗಿಸುತ್ತಿದ್ದ ಕಾರುಗಳು, ರಾಜ-ರಾಣಿಯರು ಬಳಸುತ್ತಿದ್ದ ಕಾರುಗಳು 1850 ರಿಂದ 1980 ರಲ್ಲಿ ಬಳಕೆಯಾಗುತ್ತಿದ್ದ ಕಾರುಗಳಾದ ಫಾರ್ಡ್, ಓಪೆಲ್ ಕಡೆಟ್, ಆಸ್ಟಿನ್, ಫಿಯೆಟ್ ಸೇರಿದಂತೆ ವಿವಿಧ ಕಂಪೆನಿಯ ಹಲವು ಬಗೆಯ ಕಾರುಗಳು ಸುಸ್ಥಿತಿಯಲ್ಲಿದ್ದು, ಚಾಲನೆಗೆ ಯೊಗ್ಯವಾಗಿದೆ. ಬ್ರಿಟೀಷರ ಕಾಲದ ಕಾರುಗಳು, ಸ್ವಾತಂತ್ರ್ಯ ಪೂರ್ವದ ವಿವಿಧ ಕಾರುಗಳು ಹಾಗೂ ಸ್ವಾತಂತ್ರ್ಯ ನಂತರದ ಕಾರುಗಳ ಸಂಗ್ರಹ ಸಂಗ್ರಹಾಲಯದಲ್ಲಿದ್ದು, ಜಿಲ್ಲೆ, ಹೊರ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳ ನೂರಾರು ಪ್ರವಾಸಿಗರು ನಿತ್ಯ ಕಾರ್ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.

ಒಂದೆಡೆ ಕಾರ್‍ಗಳ ರಾಣಿಯರು ಇದ್ದರೆ ಮತ್ತೊಂದೆಡೆ ಗತವೈಭವವನ್ನು ನೆನಪಿಸುವ ರಾಜರ ಸಾರೋಟು ಸೇರಿದಂತೆ ವಿವಿಧ ಬಗೆಯ ಬೈಕ್‍ಗಳು ಕೂಡ ನೋಡುಗರ ಗಮನ ಸೆಳೆಯುತ್ತಿದೆ. ಬಹುತೇಕ ಎಲ್ಲಾ ವಾಹನಗಳು ಚಾಲನೆಗೆ ಯೋಗ್ಯವಾಗಿದ್ದು, ಕೆಲವೊಂದು ವಾಹನಗಳನ್ನು ಅಹಮ್ಮದ್ ಕುಟ್ಟಿ ಹಾಜಿ ಅವರು ಇಂದಿಗೂ ಚಾಲನೆ ಮಾಡುತ್ತಿರುವದು ವಿಶೇಷವಾಗಿದೆ.

ಪ್ರತಿ ವರ್ಷವೂ ಕೂಡ ಅಹಮ್ಮದ್ ಹಾಜಿ ಅವರು ಹಳೆಯ ಕಾರುಗಳ ಪ್ರದರ್ಶನ ನಡೆಸುತ್ತಿದ್ದು, ಕಳೆದ ವರ್ಷದ ಪ್ರದರ್ಶನದಲ್ಲಿ ಸುಮಾರು 10 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಕರ್ನಾಟಕದಲ್ಲಿ ಧರ್ಮಸ್ಥಳ ಬಿಟ್ಟರೆ ಅತಿದೊಡ್ಡ ಹಳೆಯ ಕಾರ್‍ಗಳ ಸಂಗ್ರಹಾಲಯ ಇದಾಗಿದೆ ಎಂದು ಪ್ರತಿಷ್ಠಿತ ಕಂಪೆನಿಯೊಂದು ತನ್ನ ಅಂತರ್ಜಾಲದಲ್ಲಿ ಪ್ರಕಟಿಸಿದೆ.

- ಎ.ಎನ್. ವಾಸು