ಕೂಡಿಗೆ, ಮಾ. 6: ಸೋಮವಾರಪೇಟೆ ಕೋವರ್‍ಕೊಲ್ಲಿ ಜಂಕ್ಷನ್‍ನಿಂದ ಕೂಡಿಗೆ ಸರ್ಕಲ್‍ವರೆಗೆ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿಯು ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ರೂ. 18 ಕೋಟಿ ಮಂಜೂರಾಗಿ ಕಾಮಗಾರಿಯು ಶೇ. 50 ರಷ್ಟು ಮುಗಿದಿದೆ.

ಕೋವರ್‍ಕೊಲ್ಲಿ-ಕೂಡಿಗೆವರೆಗೆ ಮೋರಿಗಳ ನಿರ್ಮಾಣವಾದರೂ ಸಮರ್ಪಕವಾಗಿ ನೀರು ಹರಿಯದ ರೀತಿಯಲ್ಲಿ ಮೋರಿಗಳ ಕಾಮಗಾರಿ ನಡೆಸಲಾಗಿದೆ. 1 ಕಿ.ಮೀ.ಗೆ ರೂ. 1 ಕೋಟಿ ವೆಚ್ಚದ ಕಾಮಗಾರಿಯು ಅವೈಜ್ಞಾನಿಕವಾಗಿದೆ. ರಸ್ತೆಯ ಅಗಲೀಕರಣ ಮತ್ತು ಮನಬಂದಂತೆ ಮೆಟ್ಲಿಂಗ್ ಅಲ್ಲದೆ, ಡಾಂಬರೀಕರಣವು ಹೊಸ ತಾಂತ್ರಿಕತೆಯಿದ್ದರೂ ಹಳೇ ಮಾದರಿಯಲ್ಲಿ 30 ಕಿ.ಮೀ. ದೂರದಿಂದ ಡಾಂಬರ್ ಅನ್ನು ಮಿಕ್ಸಿಂಗ್ ಮಾಡಿ ರಸ್ತೆ ನಿರ್ಮಾಣ ಮಾಡುತ್ತಿರುವದು ಕಾಣುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ಹಾಕಿದ ಡಾಂಬರ್ ಕಿತ್ತು ಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಸ್ತೆಗೆ ಡಾಂಬರೀಕರಣ ಮಾಡುವಾಗ ಸಂಬಂಧಪಟ್ಟ ಇಂಜಿನಿಯರ್‍ಗಳನ್ನು ಸ್ಥಳದಲ್ಲಿರಿಸಿ ಕೊಳ್ಳದೆ ಗುತ್ತಿಗೆ ಪಡೆದ ಗುತ್ತಿಗೆದಾರ ಮನಬಂದಂತೆ ಡಾಂಬರೀಕರಣ ಮಾಡಿರುವದು ಹಾಗೂ ಇಲಾಖೆಯ ಅಧಿಕಾರಿಗಳು ಸಂಬಂಧವೇ ಇಲ್ಲವೆಂಬಂತೆ ಇರುವದರಿಂದ ಕಳಪೆ ಮಟ್ಟದ ಕಾಮಗಾರಿಯನ್ನು ನಡೆಸುತ್ತಿದ್ದಾರೆ ಎಂದು ಜಯಣ್ಣ, ಪ್ರಕಾಶ್, ಬೊಮೈನ ಚಿಣ್ಣಪ್ಪ, ಧನು, ಮಂಜುನಾಥ್ ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ಇದಕ್ಕೆ ಸಂಬಂಧಟ್ಟಂತೆ ಸೋಮವಾರಪೇಟೆಯ ವಿವಿಧ ಸಂಘ-ಸಂಸ್ಥೆಗಳು ಕೋವರ್‍ಕೊಲ್ಲಿಯಲ್ಲಿ ಪ್ರತಿಭಟನೆ ನಡೆಸಿ, ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಕಳಪೆ ಕಾಮಗಾರಿಯೆಂದು ತಿಳಿದುಬಂದ ನಂತರ ಮುಂದಿನ ದಿನಗಳಲ್ಲಿ ಉತ್ತಮ ಕಾಮಗಾರಿ ನಡೆಸಲು ತಿಳಿಸಿದರೂ ಇದುವರೆಗೂ ಯಾವದೇ ರೀತಿಯ ಗುಣಮಟ್ಟದ ಕಾಮಗಾರಿ ನಡೆಸದೆ, ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಾ ಸಾಗುತ್ತಿದ್ದಾರೆ. ರಸ್ತೆ ನಿರ್ಮಾಣದ ಸಂದರ್ಭ ರಸ್ತೆ ಬದಿಗೆ ನೀರು ಹರಿಯಲು ವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡುವ ನಕ್ಷೆ ಇದ್ದರೂ ಅದನ್ನು ಗಾಳಿಗೆ ತೂರಿ ರಸ್ತೆಯನ್ನು ನಿರ್ಮಿಸಿಕೊಂಡು ಹೋಗುತ್ತಿದ್ದಾರೆ. ಈ ರಸ್ತೆ ಕಾಮಗಾರಿ ಪಡೆದ ಗುತ್ತಿಗೆದಾರ, ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ತಾಲೂಕು ಮಟ್ಟದ ಅಧಿಕಾರಿಗಳ ಮಾತಿಗೆ ಕಿವಿಗೊಡದೆ ಕಳಪೆ ಮಟ್ಟದಲ್ಲಿಯೇ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ರೂ. 18 ಕೋಟಿ ವೆಚ್ಚದ 12 ಕಿ.ಮೀ. ರಸ್ತೆಯು ಮುಂದಿನ ಮಳೆಗಾಲಕ್ಕೆ ಗುಂಡಿಬೀಳುವದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕರು, ಜಿಲ್ಲಾಮಟ್ಟದ ಉನ್ನತ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವ್ಯವಸ್ಥಿತವಾದ ರಸ್ತೆ ಕಾಮಗಾರಿ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ತಾಲೂಕು ಲೋಕೋಪಯೋಗಿ ಇಲಾಖೆಯ ಅಧಿಕಾರಿಯನ್ನು ಮಾತನಾಡಿಸಿದಾಗ ಟೆಂಡರ್ ಪಡೆದ ಗುತ್ತಿಗೆದಾರ ನಿಯಮಾನುಸಾರ ರಸ್ತೆ ಕಾಮಗಾರಿಯನ್ನು ಮಾಡುವದಾಗಿ ಹೇಳುತ್ತಿದ್ದಾರೆ. ಆದರೆ, ನಕ್ಷೆಯಲ್ಲಿ ತೋರಿಸಿದ ರೀತಿಯಲ್ಲಿ ಕಾಮಗಾರಿ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

- ಕೆ.ಕೆ. ನಾಗರಾಜ ಶೆಟ್ಟಿ.