ವೀರಾಜಪೇಟೆ, ಮಾ. 6: ವಾಹನ ಅವಘಡದಲ್ಲಿ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಗಡಿಭಾಗದಲ್ಲಿ ಸಂಭವಿಸಿದೆ. ವೀರಾಜಪೇಟೆ ತಾಲೂಕಿನ ಧನುಗಾಲ ಬೆಮ್ಮತ್ತಿ ನಿವಾಸಿ ಮುಸ್ತಫ (50) ವಾಹನ ಅವಘಡದಲ್ಲಿ ಮೃತಪಟ್ಟ ವ್ಯಕ್ತಿ. ಮುಸ್ತಫ ಮತ್ತು ಸಂಗಡಿಗರಾದ ಟಿ.ಸಿ ಅಲಿ, ಕೆ.ಎಂ. ಯೂಸುಫ್, ಅಹಮ್ಮದ್ ಮತ್ತು ಎಡಪಾಲ ಗ್ರಾಮದ ಯೂಸುಫ್ ಅವರುಗಳು ಮಾರುತಿ ಕಾರಿನಲ್ಲಿ (ಕೆಎ.09-ಜೆಡ್-7907) ತನ್ನ ಮಗಳಿಗೆ ವರನ ನೋಡುವ ಸಲುವಾಗಿ ಕೇರಳದ ಇರಿಟ್ಟಿ ಪಟ್ಟಣಕ್ಕೆ ತೆರಳಿದ್ದರು.
ರಾತ್ರಿ 11 ಗಂಟೆಗೆ ಮಾಕುಟ್ಟ ಪೊಲೀಸ್ ತಪಾಸಣಾ ಕೇಂದ್ರದಿಂದ ಅನತಿ ದೂರದ ಸಣ್ಣದಾದ ತಿರುವೊಂದರಲ್ಲಿ ವಾಹನವು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ. ಪರಿಣಾಮ ವಾಹನ ಚಲಾಯಿಸುತ್ತಿದ್ದ ಮುಸ್ತಫ ಅವರಿಗೆ ತಲೆ ಮತ್ತು ಎದೆಯ ಭಾಗಕ್ಕೆ ಮಾರಣಾಂತಿಕ ಗಾಯಗಳಾಗಿದ್ದು, ಇರಿಟ್ಟಿ ಅಮಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಪೆರಿಯಾರ್ ಮೆಡಿಕಲ್ ಕಾಲೇಜಿಗೆ ರವಾನಿಸುತ್ತಿದ್ದ ಮಾರ್ಗದ ಮಧ್ಯೆ ಮುಸ್ತಫ ಅವರು ಮರಣ ಹೊಂದಿದ್ದಾರೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇತರ ನಾಲ್ಕು ಮಂದಿಗೆ ತಲೆ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿ ಗಾಯಳುಗಳನ್ನು ಇರಿಟ್ಟಿ ಅಮಲ ಅಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ದಾಖಲಾಗಿದ್ದಾರೆ. ಟಿ.ಸಿ ಅಲಿ ನೀಡಿದ ದೂರಿನ ಅನ್ವಯ ವೀರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
-ಕೆ.ಕೆ.ಎಸ್