ಮಡಿಕೇರಿ, ಮಾ. 6: ಇಂದು ಬೆಳಿಗ್ಗೆಯಿಂದಲೇ ಮಹಿಳೆಯರದ್ದೇ ದರ್ಬಾರು.., ಒಂದು ಕಡೆಯಲ್ಲಿ ರಸಗವಳ.., ಮತ್ತೊಂದು ಕಡೆಯಲ್ಲಿ ಕಾನೂನು ಮಾಹಿತಿ.., ಇನ್ನೊಂದು ಕಡೆ ಭಾವನೆಗಳ ರಸಧಾರೆ..,
ಇದು ಕಂಡುಬಂದಿದ್ದು ಇಲ್ಲಿನ ಸ್ತ್ರೀಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪೌಷ್ಟಿಕ ಆಹಾರ ತಯಾರಿಕೆ ಸ್ಪರ್ಧೆ, ಪ್ರತ್ಯಕ್ಷಿಕೆ, ಮಹಿಳಾ ಕಾನೂನು ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಮಹಿಳಾ ಕವಿಗೋಷ್ಠಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಇದೇ ಪ್ರಥಮ ಬಾರಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಪೌಷ್ಟಿಕ ಆಹಾರದ ಬಗ್ಗೆ ಪ್ರೊ. ಕೃತಿಕಾ ಹಾಗೂ ಪ್ರೊ. ಶಿವರಾಜ್ ವತಿಯಿಂದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಹಿತಿ ನೀಡಿದರು.ವಕೀಲರಾದ ಮೀನಾಕುಮಾರಿ ಹಾಗೂ ಶರತ್ ಕಾನೂನು ಅರಿವಿನ ಮಹತ್ವದ ಬಗ್ಗೆ ವಿವರಿಸಿದರು. ಸಾಹಿತಿಗಳಾದ ಸ್ಮಿತಾ ಅಮೃತ್‍ರಾಜ್ ಹಾಗೂ ಬಿ.ಎ. ಷಂಶುದ್ದೀನ್ ಅವರುಗಳು ಸಾಹಿತ್ಯ, ಕವನ ರಚನೆ ಬಗ್ಗೆ ವಿವರಿಸಿದರು. ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಉಪನಿರ್ದೇಶಕ ಮಲ್ಲೇಸ್ವಾಮಿ ಉದ್ಘಾಟಿಸಿದರು. ಮಹಿಳಾ ಅಭಿವೃದ್ಧಿ ಅಧಿಕಾರಿ ಮಮ್ತಾಜ್, ಸವಿತಾ ಇನ್ನಿತರರು ಪಾಲ್ಗೊಂಡಿದ್ದರು.