ವೀರಾಜಪೇಟೆ, ಮಾ. 6: ಮಡಿಕೇರಿಯಲ್ಲಿ ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದ ಸಚಿವರ ರಕ್ಷಣೆಯಲ್ಲಿದ್ದರೇ ಹೊರತು ಗಣಪತಿ ಕುಟುಂಬಕ್ಕೆ ಕನಿಷ್ಟ ಸಾಂತ್ವಾನ ಹೇಳದಿರುವದು ಅವರ ಮುಖ್ಯಮಂತ್ರಿ ಪದವಿಗೆ ಶೋಭೆ ತರುವಂತದ್ದಲ್ಲ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.ವೀರಾಜಪೇಟೆ ಪುರಭವನದಲ್ಲಿ ಹಮ್ಮಿಕೊಂಡಿದ್ದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರುಗಳ ಸಭೆಯಲ್ಲಿ ಭಾಗವಹಿಸಿದ್ದ ಸಂಕೇತ್ ಪೂವಯ್ಯ ಅವರು ಕೊಡಗಿನಲ್ಲಿ ಐದು ಬಾರಿ ಉಸ್ತುವಾರಿ ಸಚಿವರ ಬದಲಾವಣೆ, ಕಾಡಾನೆ ಧಾಳಿಯಿಂದ 40 ಮಂದಿ ಸಾವು, ಸುಮಾರು 100ಕ್ಕೂ ಮೇಲ್ಪಟ್ಟು ಕೂಲಿ ಕಾರ್ಮಿಕರು ಅಂಗ ವೈಫಲ್ಯತೆಯಿಂದ ನರಳುತ್ತಿದ್ದರೂ ಅರಣ್ಯ ಸಚಿವರು ಸೌಜನ್ಯಕ್ಕಾದರೂ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳದಿರುವದು ವಿಷಾದನೀಯ. ದಿಡ್ಡಳ್ಳಿ ನಿರಾಶ್ರಿತರನ್ನು ಬೀದಿ ಪಾಲು ಮಾಡಿರುವದು, ಪೊನ್ನಂಪೇಟೆ ತಾಲೂಕು ರಚನೆಗೆ ಬೇಡಿಕೆಗೆ ಸರಕಾರ ಸ್ಪಂದಿಸದಿರುವ ಮೂಲಕ ಕಾಂಗ್ರೆಸ್ ಸರಕಾರ ನಿರಂತರವಾಗಿ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿದರು.

ದೇಶದ ಯುವ ಶಕ್ತಿಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಅಧಿಕಾರ ಕ್ಕಾಗಿ ದುರ್ಬಳಕೆ ಮಾಡಿಕೊಂಡು ಇಂದು ಯುವ ಶಕ್ತಿಯನ್ನು ಮೂಲೆ ಗುಂಪು ಮಾಡಿವೆ. ಎರಡು ಪಕ್ಷಗಳಿಗೂ ಅಧಿಕಾರ ಬೇಕೇ ವಿನಃ ಜನರ ಸಮಸ್ಯೆಗಳು, ಬೇಕು ಬೇಡಿಕೆಗಳ ಕುರಿತು ಚಿಂತನೆ ಇಲ್ಲ ಎಂದರು.

ಮಾಜಿ ಸಚಿವ ಜೀವಿಜಯ ಮಾತನಾಡಿ ಈ ಬಾರಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪಕ್ಷದ ಎಲ್ಲರ ಒಮ್ಮತ ಅಭ್ಯರ್ಥಿಯಾಗಿ ಪಕ್ಷದ ಸಂಘಟನೆ ಸಾಮಥ್ರ್ಯ ಹೊಂದಿರುವ ಸಂಕೇತ್ ಪೂವಯ್ಯ ಅವರಿಗೆ ವರಿಷ್ಠರು ಟಿಕೇಟ್ ನೀಡಿದ್ದಾರೆ. ಪಕ್ಷದ ಎಲ್ಲ ಕಾರ್ಯಕರ್ತರು ಒಮ್ಮತದಿಂದ ಚುನಾವಣಾ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಎರಡೂ ರಾಷ್ಟ್ರೀಯ ಪಕ್ಷಗಳ ಸರ್ಕಾರವನ್ನು ಜಿಲ್ಲೆಯ ಜನತೆ ನೋಡಿದ್ದಾರೆ.

(ಮೊದಲ ಪುಟದಿಂದ) ಆದರೆ ರೈತರ ಸಮಸ್ಯೆಗಳನ್ನು ಆಲಿಸಲು ಇವರಿಂದ ಸಾಧ್ಯವಾಗಲಿಲ್ಲ, ಮುಂದೆ ರಾಜ್ಯದ ರಾಜಕೀಯದಲ್ಲಿ ಬಾರಿ ಬದಲಾವಣೆ ಆಗುವ ಲಕ್ಷಣಗಳು ಕಾಣುತ್ತಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಗೆಲ್ಲಿಸಲು ಮತದಾರ ನಿರ್ಧಾರ ಮಾಡಿದ್ದಾನೆ,

ಜಿಲ್ಲೆಯಲ್ಲಿ ಈ ಬಾರಿ ಸಂಕೇತ್ ಪೂವಯ್ಯ, ಬಿ.ಎ. ಜೀವಿಜಯ ಅವರನ್ನು ಗೆಲ್ಲಿಸಲೇಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಾಜಿ ಬೆಳೆಗಾರರ ಹೋರಾಟ ಸಮಿತಿಯ ಮುಖಂಡ ಅಜ್ಜಮಾಡ ಶಂಕರು ನಾಚಪ್ಪ ಹೇಳಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾವೇಶವನ್ನುದ್ದೇಶಿಸಿ ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಸತೀಶ್ ಜೋಯಪ್ಪ, ಮನ್ಸೂರ್ ಆಲಿ, ಐಸಾಕ್ ಖಾನ್, ಮನೋಜ್ ಬೋಪಯ್ಯ ಮಾತನಾಡಿದರು. ಕೆ.ಎಂ. ಗಣೇಶ್, ಸುಮಿತ್ರ, ಮುತ್ತಮ್ಮ, ಕೆ.ಸಿ. ನಾಣಯ್ಯ, ಎಂ.ಸಿ. ಬೆಳ್ಯಪ್ಪ, ಅಮ್ಮಂಡ ವಿವೇಕ್, ಶಂಕರಿ ನಾಚಪ್ಪ, ಸಿ.ಎ. ನಾಸರ್, ರಾಜಾರಾವ್ ಮತ್ತಿತರರು ಉಪಸ್ಥಿತರಿದ್ದರು. ಪಕ್ಷದ ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಸ್ವಾಗತಿಸಿ ನಿರೂಪಿಸಿದರು. ತಾಲೂಕಿನಾದ್ಯಂತ ಪಕ್ಷದ ಕಾರ್ಯಕರ್ತರುಗಳು ಭಾಗವಹಿಸಿದ್ದರು.