ಕೂಡಿಗೆ, ಮಾ. 6: ಹೆಬ್ಬಾಲೆ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷೆ ಲತಾ ಅಧ್ಯಕ್ಷತೆಯಲ್ಲಿ ಮಾರುಕಟ್ಟೆ ಆವರಣದಲ್ಲಿ ನಡೆಯಿತು. ಪಂಚಾಯಿತಿಯ 15 ಸದಸ್ಯರಲ್ಲಿ ನಾಲ್ವರು ಸದಸ್ಯರ ಗೈರು ಹಾಜರಿ ಮತ್ತು ಆಹಾರ ಇಲಾಖೆ, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಬಾರದಿರುವದನ್ನು ಗಮನಿಸಿ ಗ್ರಾಮಸ್ಥರಾದ ಚಂದ್ರಹಾಸ, ಮಂಜುನಾಥ್, ಗಣೇಶ್, ದಿನೇಶ್, ಗೌರಮ್ಮ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದರು.

ಕಂದಾಯ ಇಲಾಖೆಯ ವತಿಯಿಂದ ನೀಡುತ್ತಿರುವ ಹಕ್ಕುಪತ್ರ ವಿತರಣೆಯ ಸಂದರ್ಭ ಸ್ಥಳ ಪರಿಶೀಲನೆ ಮಾಡುತ್ತಿಲ್ಲ ಹಾಗೂ ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಹೆಚ್ಚು ಅನುದಾನವನ್ನು ಕಾದಿರಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು. ಅಲ್ಲದೆ, ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಕಾವೇರಿ ನದಿಗೆ ಸೋಪಾನಕಟ್ಟೆ ಮತ್ತು ಸಮೀಪದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದು ಕಣಿವೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಹೆಬ್ಬಾಲೆಯಲ್ಲಿನ ಸರ್ವೆ ನಂ. 148/1ರಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಿಸುವಂತೆ ಆ ವ್ಯಾಪ್ತಿಯ ಗ್ರಾಮಸ್ಥರು ಸಭೆಯಲ್ಲಿ ಒತ್ತಾಯಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಈ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕುಡಿಯುವ ನೀರು ಮತ್ತು ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವದು. ಈಗಾಗಲೇ ತಾಲೂಕು ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಅನೇಕ ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಇನ್ನು ಹೆಚ್ಚಿನ ಅನುದಾನವನ್ನು ಕಾಯ್ದಿರಿಸಿ ಕುಡಿಯುವ ನೀರಿನ ವ್ಯವಸ್ಥೆಗೆ ಅತಿ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಮಾತನಾಡಿ, ಈಗಾಗಲೇ ಮಾಸಿಕ ಸಭೆಯಲ್ಲಿ ಅನೇಕ ಕ್ರೀಯಾ ಯೋಜನೆಗಳನ್ನು ತಯಾರಿಸಲಾಗಿದ್ದು, ಹಂತ ಹಂತವಾಗಿ ಆಯಾ ವಾರ್ಡಿನ ಆದ್ಯತೆಯ ಮೇಲೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವದು. ಅಲ್ಲದೆ, ಮೂಲಭೂತ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಕಾದಿರಿಸಿ, ಕಾರ್ಯೋನ್ಮುಖರಾಗಿರುತ್ತೇವೆ ಎಂದರು.

ನೋಡಲ್ ಅಧಿಕಾರಿಯಾಗಿ ಸೋಮವಾರಪೇಟೆ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ಇದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಅವರು, ಸಭೆಗೆ ಸರ್ಕಾರದ ಯೋಜನೆಗಳ ಬಗ್ಗೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ವಿವರಿಸಿದರು. ಅಲ್ಲದೆ, ಗ್ರಾಮಸ್ಥರು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ತಮ್ಮ ತಮ್ಮ ವಾರ್ಡಿನ ಕಾಮಗಾರಿಗಳನ್ನು ಸಮರ್ಪಕವಾಗಿ ಪೂರೈಸಿಕೊಳ್ಳಲು ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಕೋರಿದರು.

ಸಭೆಯಲ್ಲಿ ಈ ಸಾಲಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಿಗೆ ನಿರ್ಮಿಸಲು ಫಲಾನುಭವಿಗಳ ಆಯ್ಕೆ ಮಾಡಲಾಯಿತು. ಗ್ರಾಮಸ್ಥರು ವಿವಿಧ ಸವಲತ್ತುಗಳನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಿದರು. ಸಭೆಗೆ ಆಗಮಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆಯ ಮಾಹಿತಿಗಳನ್ನು ಗ್ರಾಮಸ್ಥರಿಗೆ ತಿಳಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಜಯಣ್ಣ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.