ಮಡಿಕೇರಿ, ಮಾ. 6: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸೇರ್ಪಡೆಯಾದ, ಕೈಬಿಡಲಾದ ಮತ್ತು ಅಂತಿಮವಾಗಿ ಇರುವ ಮತದಾರರ ವಿವರಗಳ ಪಟ್ಟಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಡೇಗೌಡ ಪ್ರಕಟಿಸಿದ್ದಾರೆ. ಬಿಟ್ಟು ಹೋದವರ ಹೆಸರು ಸೇರ್ಪಡೆಗೆ ಕರೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಅವರು, ಜಿಲ್ಲೆಯಲ್ಲಿ ಒಟ್ಟು 4,25,023 ಮತದಾರರಿದ್ದು, ಇವರಲ್ಲಿ 2,12,071 ಪುರುಷ ಮತದಾರರು ಮತ್ತು 2,12,952 ಮಹಿಳಾ ಮತದಾರರನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 2,12,277 ಮತದಾರರಿದ್ದು, ಇವರಲ್ಲಿ 1,05,392 ಪುರುಷ ಮತದಾರರು ಮತ್ತು 1,06,885 ಮಹಿಳಾ ಮತದಾರರು ಇದ್ದಾರೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,12,746 ಮತದಾರರಿದ್ದು, ಇವರಲ್ಲಿ 1,06,679 ಪುರುಷ ಮತದಾರರು ಮತ್ತು 1,06,067 ಮಹಿಳಾ ಮತದಾರರು ಇದ್ದಾರೆ.
ಪರಿಷ್ಕರಣೆಯ ಅಂತಿಮ ಮತದಾರರ ಪಟ್ಟಿಯನ್ನು 2018ರ ಫೆಬ್ರವರಿ 28 ರಂದು ಜಿಲ್ಲಾ ಚುನಾವಣಾಧಿಕಾರಿ ಕಚೇರಿ, ಮತದಾರರ ನೋಂದಣಾಧಿಕಾರಿ ಕಚೇರಿ, ಎಲ್ಲಾ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ, ಮತಗಟ್ಟೆಗಳಲ್ಲಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ, ನಾಡ ಕಚೇರಿಗಳಲ್ಲಿ ಹಾಗೂ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಟ್ಟಿ ಪ್ರಕಟಿಸಲಾಗಿದ್ದು, ಮತದಾರರು ಮತ್ತೊಮ್ಮೆ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಹೆಸರು ಇರುವ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ ಡಾ.ನಂಜುಂಡೇಗೌಡ ಅವರು ಕೋರಿದರು.
ಸೇರ್ಪಡೆಯಾಗದೇ ಇರುವ ಯುವ ಮತದಾರರು, ಮಹಿಳೆಯರು, ಮತ್ತು ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲು ನಮೂನೆ-6ನ್ನು ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳಿಗೆ, ತಾಲೂಕು ಕಚೇರಿಗೆ ಸಲ್ಲಿಸುವದು.
ತಿದ್ದುಪಡಿ ಇದ್ದಲ್ಲಿ ನಮೂನೆ-8 ರಲ್ಲಿ, ಮೃತ, ಸ್ಥಳಾಂತರ ಇರುವ ಮತದಾರರನ್ನು ತೆಗೆಯಲು ನಮೂನೆ- 7ರಲ್ಲಿ ಹಾಗೂ ವರ್ಗಾವಣೆ ಮಾಡಲು ನಮೂನೆ-8ಎ ರಲ್ಲಿ ಅರ್ಜಿಯನ್ನು ಸಂಬಂಧಪಟ್ಟ ಬೂತ್ಮಟ್ಟದ ಅಧಿಕಾರಿಗಳಿಗೆ ಅಥವಾ ತಾಲೂಕು ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಇಎಲ್ ಸಂಸ್ಥೆಯ ಇಂಜಿನಿಯರ್ಗಳು ಇವಿಎಂ ಮತ್ತು ವಿವಿಪ್ಯಾಟ್ಗಳ ಮೊದಲ ಹಂತದ ಪರಿಶೀಲನಾ ಕಾರ್ಯವನ್ನು ಇದೇ ಫೆಬ್ರವರಿ 28 ರಿಂದ ಆರಂಭಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ ವಿಧಾನಸಭಾ ಸಾರ್ವತ್ರಿಕ ಚುನಾವಣೆಯು ‘‘ಸುಗಮ ಮತ್ತು ನೈತಿಕ ಚುನಾವಣೆ” ಘೋಷ ವ್ಯಾಖ್ಯೆಯಾಗಿದ್ದು, ಯುವ ಮತದಾರರ ನೋಂದಣಿ, ಮಹಿಳಾ ಮತದಾರರ ನೋಂದಣಿಯನ್ನು ಹೆಚ್ಚಿಸುವದು ಈ ಕಾರ್ಯದ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿವರಿಸಿದರು. ಎಲ್ಲಾ ಮತಗಟ್ಟೆಗಳಲ್ಲಿ ಖಚಿತ ಕನಿಷ್ಟ ಸೌಲಭ್ಯ ಕುಡಿಯುವ ನೀರು, ರ್ಯಾಂಪ್, ಶೌಚಾಲಯ, ವಿದ್ಯುತ್ ಸಂಪರ್ಕ ಮತ್ತಿತ್ತರ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿವರಿಸಿದರು.
ಅಂತಿಮ ಮತದಾರರ ಪಟ್ಟಿಯನ್ನು ಇದೇ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಿದರು. ಕಾಂಗ್ರೆಸ್ ಪಕ್ಷದ ತನ್ನೀರಾ ಮೈನಾ, ಮುದ್ದಪ್ಪ, ಭಾರತೀಯ ಜನತಾ ಪಕ್ಷದಿಂದ ಸಜಿಲ್ ಕೃಷ್ಣ ಮತದಾರರ ಪಟ್ಟಿಯನ್ನು ಪಡೆದರು. ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯ ಅನಿಲ್ ಕುಮಾರ್ ಇದ್ದರು.