ಶ್ರೀಮಂಗಲ, ಮಾ. 6: ದಕ್ಷಿಣ ಕೊಡಗಿನ ಬಾಳೆಲೆ-ನಿಟ್ಟೂರು ನಡುವೆ ಲಕ್ಷ್ಮಣ ತೀರ್ಥ ನದಿಗೆ ನಿರ್ಮಿಸುತ್ತಿರುವ ನೂತನ ಸೇತುವೆ ಕಾಮಗಾರಿ ಅಪೂರ್ಣವಾಗಿದೆ. ಈ ಮಳೆಗಾಲದೊಳಗೆ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತಗೊಳ್ಳ ದಿದ್ದರೆ, ಈ ವ್ಯಾಪ್ತಿಯ ಜನರಿಗೆ ಸಂಪರ್ಕ ಕಡಿತವಾಗುವ ಆತಂಕವಿದೆ. ಆದ್ದರಿಂದ ಮಳೆಗಾಲಕ್ಕೆ ಮುನ್ನ ಕಾಮಗಾರಿ ಮುಗಿಸುವಂತೆ ಇಲ್ಲಿನ ಸಾರ್ವಜನಿಕ ಮುಖಂಡರು ಒತ್ತಾಯಿಸಿದ್ದಾರೆ.

ಬಾಳೆಲೆ-ನಿಟ್ಟೂರು ರಸ್ತೆಯು ಅಂತರ್ ಜಿಲ್ಲಾ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆ ಮೂಲಕ ಕಾರ್ಮಾಡು, ಕೊಟ್ಟಗೇರಿ, ಕಾನೂರು, ಕುಟ್ಟ ಮುಖಾಂತರ ಕೇರಳ ರಾಜ್ಯಕ್ಕೆ ಹಾಗೂ ಮೂರ್ಕಲ್ಲ್, ಮೈಸೂರಿನ ಹೆಚ್.ಡಿ. ಕೋಟೆ, ಹುಣಸೂರು ಭಾಗಕ್ಕೂ ನಾಗರಹೊಳೆ ಅಭಯಾರಣ್ಯದ ನಡುವೆ ಸಂಪರ್ಕ ಕಲ್ಪಿಸುತ್ತದೆ.

ಸೇತುವೆ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನಡೆಯು ತ್ತಿದ್ದರೂ ಜಿಲ್ಲಾಡಳಿತ ಹಾಗೂ ಮುಖ್ಯ ಕಾರ್ಯಪಾಲಕರ ನಿರ್ಲಕ್ಷ್ಯದಿಂದ ಇದುವರೆಗೆ ಕಾಮಗಾರಿ ಪೂರ್ಣ ಗೊಳ್ಳದೆ, ಈ ಭಾಗದ ಜನರು ಆತಂಕವನ್ನು ಎದುರಿಸುತ್ತಿದ್ದಾರೆ.

ಮಳೆಗಾಲದಲ್ಲಿ ಲಕ್ಷ್ಮಣ ತೀರ್ಥ ನದಿ ತುಂಬಿ ಪ್ರವಾಹ ಉಂಟಾಗಿ ಹಳೆ ಸೇತುವೆಯು ಕೆಳಮಟ್ಟದಲ್ಲಿ ರುವದರಿಂದ ಮತ್ತು ಎರಡು ಬದಿಯ ರಸ್ತೆ ಸಹ ಕೆಳಮಟ್ಟದಲ್ಲಿರುವದರಿಂದ ಸೇತುವೆ ಮತ್ತು ರಸ್ತೆ ಮುಳುಗಡೆಯಾಗುತ್ತಿತ್ತು. ಇದರಿಂದ ರಸ್ತೆ ಸಂಪರ್ಕ ಕಡಿತವಾಗುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ದಿ. ಬಿದ್ದಾಟಂಡ ಟಿ. ಪ್ರದೀಪ್ ಅವರ ಮುಂದಾಳತ್ವದಲ್ಲಿ ಸಾರ್ವಜನಿಕರು ಡಾ. ಎಸ್. ಸಿ. ಮಹಾದೇವಪ್ಪ ಅವರು ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ದಿ. ಬಿ.ಟಿ. ಪ್ರದೀಪ್ ಅವರ ಒತ್ತಡದಿಂದ ಈ ವ್ಯಾಪ್ತಿಯ ಸಾರ್ವಜನಿಕರ ಸಮ್ಮುಖದಲ್ಲೇ ಈ ನೂತನ ಸೇತುವೆ ಹಾಗೂ ರಸ್ತೆಯನ್ನು ಎತ್ತರಿಸುವ ಆಶ್ವಾಸನೆಯನ್ನು ನೀಡಿದ್ದರು.

ಮುಂದಿನ ದಿನದಲ್ಲಿ ಕೆ.ಜೆ. ಜಾರ್ಜ್ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಎಸ್.ಸಿ. ಮಹಾದೇವಪ್ಪ ಅವರ ಆಪ್ತ ಕಾರ್ಯದರ್ಶಿ ಸಿ.ಎಂ. ರಾಜೇಂದ್ರ ಅವರ ಮುತುವರ್ಜಿ ಯಿಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಹೆಗ್ಗಡೆಯವರ ಮೇಲುಸ್ತುವಾರಿಯಲ್ಲಿ ರೂ. 6.8 ಕೋಟಿ ಅನುದಾನದಲ್ಲಿ ಸೇತುವೆ ಹಾಗೂ ರಸ್ತೆ ನಿಮಾರ್ಣಕ್ಕೆ ಚಾಲನೆ ದೊರೆಯಿತು. 2015ರಲ್ಲಿ ಅನುದಾನ ಮಂಜೂರು ಆಗಿ 2016ರಲ್ಲಿ ಕಾಮಗಾರಿ ಪ್ರಾರಂಭವಾದರೂ ಇದುವರೆಗೆ ಕೇವಲ ಶೇ. 50 ರಷ್ಟು ಕಾಮಗಾರಿ ಮುಗಿದಿದೆ. ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಎತ್ತರಿಸಿಲ್ಲ.

ಸೇತುವೆ ಆದರೂ ಎರಡು ಬದಿಯ ರಸ್ತೆಯನ್ನು ಎತ್ತರಿಸದೆ ಇರುವದರಿಂದ ಪ್ರವಾಹ ಬಂದ ಸಂದರ್ಭ ರಸ್ತೆ ಕಡಿತವಾಗುವ ಸಮಸ್ಯೆಗೆ ಮುಕ್ತಿ ದೊರೆಯುವದಿಲ್ಲ. ನೂತನವಾಗಿ ನಿಮಾರ್ಣವಾಗಿರುವ ಈ ಸೇತುವೆಯ ಎರಡು ಕಡೆಗಳಲ್ಲಿ ಸೇತುವೆ ಬಿರುಕು ಬಿಟ್ಟಿದ್ದು ಇದರಿಂದ ಈಗಾಗಲೇ ಜನರಲ್ಲಿ ಈ ನೂತನ ಸೇತುವೆಯ ಕಾಮಗಾರಿಯು ಗುಣಮಟ್ಟದಲ್ಲಿಲ್ಲ ಎಂಬ ಬಗ್ಗೆ ಅಪಸ್ವರ ಕೇಳಿಬರುತ್ತಿದೆ.

ನೂತನ ಸೇತುವೆ ನಿರ್ಮಾಣ ಮಾಡುವ ಸಂದರ್ಭ ಹಳೆ ಸೇತುವೆಯ ಕೆಲವು ಭಾಗಗಳಿಗೆ ಹಾನಿಯಾಗಿದ್ದು ಕಳೆದ ಎರಡು ವರ್ಷಗಳಿಂದ ಸಾರ್ವಜನಿಕರು ಹಾನಿಗೀಡಾಗಿರುವ ಈ ಸೇತುವೆಯ ಮೇಲೆ ಸಾಗುತ್ತಿದ್ದಾರೆ.

ಎರಡು ವರ್ಷದ ಹಿಂದೆ ಪ್ರವಾಹದ ಸಂದರ್ಭ ಹೊತ್ತು ತಂದ ಬಿದಿರು ಸೇತುವೆಗೆ ಸಿಕ್ಕಿಹಾಕಿಕೊಂಡು ಅದಕ್ಕೆ ಬೆಂಕಿ ತಗುಲಿ ಬೆಂಕಿಯ ಜ್ವಾಲೆಯಿಂದ ಸೇತುವೆಯ ಕಾಂಕ್ರೀಟ್ ಕಿತ್ತುಹೋಗಿದ್ದು ಹಲವೆಡೆ ಸೇತುವೆಗೆ ಅಳವಡಿಸಿರುವ ಕಬ್ಬಿಣದ ರಾಡುಗಳು ಕಾಣುತ್ತಿವೆ. ಮಳೆಗಾಲದ ಸಂದರ್ಭ ಈ ಹಾನಿಗೀಡಾಗಿರುವ ಸೇತುವೆ ಯಿಂದ ಅಪಾಯ ಎದುರಾಗುವ ಆತಂಕವಿದೆ.

ನೂತನ ಸೇತುವೆಯ ಒಂದು ಬದಿಯಲ್ಲಿನ ಖಾಸಗಿ ಒಡೆತನದ ಜಮೀನು ವಿವಾದದಿಂದ ಈ ನೂತನ ಸೇತುವೆ ನಿರ್ಮಾಣ ಹಾಗೂ ರಸ್ತೆ ಸಂಪರ್ಕಕ್ಕೆ ವಿಘ್ನ ಉಂಟಾಗಿದೆ. ಜಾಗ ವಿವಾದ ಸರಿಪಡಿಸಿ ಅಗತ್ಯ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಕಾಮಗಾರಿ ಮುಂದುವರೆಸಲು ಜಿಲ್ಲಾಡಳಿತಕ್ಕೆ ಹಾಗೂ ತಹಶೀಲ್ದಾರ್ ಅವರಿಗೆ ಈ ಭಾಗದ ಸಾರ್ವಜನಿಕರು ಮನವಿ ಯನ್ನು ಮಾಡಿ, ಜನಪ್ರತಿನಿಧಿಗಳು ಒತ್ತಡವನ್ನು ಹಾಕಿದ್ದಾರೆ. ಆದರೆ, ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯವರು ಸರ್ವೆ ಕಾರ್ಯವನ್ನು ಮಾಡಿ ಸಂಬಂಧಪಟ್ಟ ಜಮೀನು ವಿವಾದವನ್ನು ಪರಿಹರಿಸುತ್ತೇವೆ ಎಂಬ ಆಶ್ವಾಸನೆ ನೀಡಿದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರೊಂದಿಗೆ ನಡೆದಿರುವ ಕಾಮಗಾರಿಗೆ ಗುತ್ತಿಗೆ ದಾರರಿಗೆ ಹಣ ಸಂದಾಯ ವಾಗದಿರುವದು ಈ ಕಾಮಗಾರಿ ನಿಧಾನವಾಗಲು ಕಾರಣವಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಈಗಾಗಲೇ ಒಂದು ಕಡೆ ಹಳೆ ಸೇತುವೆ ಶಿಥಿಲಾವಸ್ಥೆಯಲ್ಲಿ ಇದ್ದು ಇನ್ನೊಂದು ಕಡೆ ನೂತನ ಸೇತುವೆ ಕಾಮಗಾರಿಯಾಗದೆ ಈ ಮಾರ್ಗವನ್ನೇ ಅವಲಂಭಿಸಿರುವ ಈ ಭಾಗದ ಮತ್ತು ಹೊರ ಜಿಲ್ಲೆಯ ಸಾರ್ವಜನಿಕರು ಆತಂಕವನ್ನು ಅನುಭವಿಸುತ್ತಿದ್ದಾರೆ. ಮಳೆಗಾಲದ ಒಳಗೆ ಈ ಕಾಮಗಾರಿ ಪೂರ್ಣ ಗೊಳ್ಳದಿದ್ದರೆ ಈ ಭಾಗದ ಜನರಿಗೆ ಸಂಪರ್ಕ ಕಡಿತಗೊಳ್ಳುತ್ತದೆ. ಪ್ರತಿ ಯೊಂದಕ್ಕೂ ಹೋಬಳಿ ಕೇಂದ್ರವಾದ ಬಾಳೆಲೆಗೆ ಈ ವ್ಯಾಪ್ತಿಯ ಜನರು ಅವಲಂಭಿಸಿದ್ದು, ಸರ್ಕಾರ ಯೋಜನೆ ರೂಪಿಸಿದರೂ ಅದು ಸಕಾಲದಲ್ಲಿ ಜನೋಪಯೋಗಕ್ಕೆ ಬಾರದೆ, ಇನ್ನೊಂದು ಕಡೆ ಸಮರ್ಪಕವಾಗಿ ಕಾಮಗಾರಿಯು ಆಗದೆ ಪರಿತಪಿಸು ವಂತ ಪರಿಸ್ಥಿತಿ ಎದುರಾಗಿದೆ.

ಈ ಬಗ್ಗೆ ಬಾಳೆಲೆ ಹೋಬಳಿಯ ಪ್ರಮುಖರು ಅಸಮದಾನ ವ್ಯಕ್ತಪಡಿಸಿದ್ದು, ಕಾಮಗಾರಿಯ ನ್ಯೂನತೆಗಳನ್ನು ಸರಿಪಡಿಸಿ ಜನ ಸೇವೆಗೆ ಮುಕ್ತಗೊಳಿಸುವಂತೆ ಒತ್ತ್ತಾಯಿಸಿದ್ದರೆ.

ಈ ಸಂದರ್ಭ ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲ್ಚೀರ ಬೋಸ್ ಚಿಟ್ಟಿಯಪ್ಪ, ವಿಜಯಲಕ್ಷ್ಮಿ ವಿದ್ಯಾಸಂಸ್ಥೆ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ನಿಟ್ಟೂರು ಗ್ರಾ.ಪಂ. ಉಪಾಧ್ಯಕ್ಷ ಪೋರಂಗಡ ಪವನ್ ಚಿಟ್ಟಿಯಪ್ಪ, ಬಾಳೆಲೆ ವಲಯ ಕಾಂಗ್ರೆಸ್ ಅಧ್ಯಕ್ಷ ಅದೇಂಗಡ ವಿನು ಉತ್ತಪ್ಪ, ಕಾಯಮಾಡ ರಾಜ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ವರದಿ: ಹರೀಶ್ ಮಾದಪ್ಪ