ಮಡಿಕೇರಿ, ಮಾ. 6: ಇಂಡೊನೇಷಿಯಾದಲ್ಲಿ ಫೆಬ್ರವರಿ 25-26 ರಂದು ನಡೆದ ‘ಇಂಡೊನೇಷಿಯ ಥ್ರೋಬಾಲ್ ಫೆಡರೇಷನ್ ಆಂಡ್ ಪಡಂಗ್ ಥ್ರೋಬಾಲ್ ಅಸೋಸಿಯೇಷನ್’ ನಡೆಸಿದ ಸ್ಪರ್ಧೆಯಲ್ಲಿ ಭಾರತೀಯ ಮಹಿಳೆಯರ ತಂಡ ಭಾಗವಹಿಸಿದ್ದು, ಅಂತಾರಾಷ್ಟ್ರೀಯ ಮಟ್ಟದ ಇಂಡಿಯಾ- ಇಂಡೊನೇಷಿಯಾ ಥ್ರೋಬಾಲ್ ಪಂದ್ಯಾವಳಿಯಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಜಿ.ಪಿ. ಕೃಪಾ ಅವರು ಮುನ್ನಡೆಸಿದ ಈ ಮಹಿಳಾ ಪಡೆಯು ಉನ್ನತ ಶ್ರೇಣಿಯ ಪ್ರದರ್ಶನ ನೀಡಿ ಭಾರತಕ್ಕೆ ಕೀರ್ತಿ ತಂದೊದಗಿಸಿದೆ. ಈ ಮಹಿಳಾ ತಂಡದಲ್ಲಿ ಕೊಡಗಿನ ಕುವರಿಯರಾದ, ನಾಪೋಕ್ಲುವಿನ ಬೊಪ್ಪಂಡ ರೀಮಾ ಅಪ್ಪಚ್ಚು ಹಾಗೂ ಸೋಮವಾರಪೇಟೆಯ ರೀತಾ ಎಲ್. ಜಯಣ್ಣ ಭಾಗಿಗಳಾಗಿದ್ದು ಮಹತ್ವದ ಆಟವನ್ನಾಡಿದ್ದಾರೆ. ಈ ಕೀರ್ತಿ ತಂದ ಭಾರತದ ಮಹಿಳಾ ಪಡೆಯನ್ನು ಕೋಚ್ ಅಕೀಬ್ ಮಹಮ್ಮದ್ ಹಾಗೂ ವ್ಯವಸ್ಥಾಪಕ ಶರಣುಕುಮಾರ್ ಅಭಿನಂದಿಸಿದ್ದಾರೆ.