ಮಡಿಕೇರಿ, ಮಾ. 5: ಬೆಂಗಳೂರಿನಲ್ಲಿ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆ ಇಂದಿನಿಂದ ಆರಂಭಗೊಂಡಿದ್ದು, ಸಧ್ಯದಲ್ಲೇ ಈ ಸೇವೆಯನ್ನು ಕೊಡಗಿಗೂ ವಿಸ್ತರಿಸಲಾಗುತ್ತಿದೆ.
ತಂಬಿ ಏವಿಯೇಷನ್ ಪ್ರೈ.ಲಿ. ಕಂಪೆನಿಯು ಈ ಸೇವೆ ಆರಂಬಿಸಿದ್ದು, ಇಂದಿನಿಂದ ಬೆಂಗಳೂರು ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಪಯಣಿಗರನ್ನು ಒಯ್ಯಲಾಗುತ್ತದೆ. ಸುಮಾರು 3500 ರೂಪಾಯಿಗಳಲ್ಲಿ ನಗರಕ್ಕೆ ತಲಪಬಹುದಾಗಿದ್ದು, ರಸ್ತೆಯ ಮೂಲಕ ಸಾಗಲು ಎರಡು ತಾಸು ವ್ಯಯಿಸುವ ಬದಲು, ಹದಿನೈದು ನಿಮಿಷಗಳಲ್ಲೇ ಗುರಿ ತಲಪಬಹುದು ಎಂದು ಕಂಪೆನಿಯ ಮುಖ್ಯಸ್ಥ ಗೋವಿಂದ ನಾಯರ್ ಹೇಳಿದ್ದಾರೆ.ಇದೀಗ ಇಲೆಕ್ಟ್ರಾನಿಕ್ ಸಿಟಿ ಮತ್ತು ಎಚ್.ಎ.ಎಲ್.ಗೆ ಸೇವೆ ಸೀಮಿತವಾಗಿದ್ದು, ಸಧ್ಯದಲ್ಲೇ ಸೇವೆಯನ್ನು ಇತರೆಡೆಗಳಿಗೆ ವಿಸ್ತರಿಸಲಾಗುತ್ತದೆ.
ಇದರೊಂದಿಗೆ ಕೊಡಗು ಹಾಗೂ ಚಿಕ್ಕಮಗಳೂರಿಗೆ ‘ಪ್ಯಾಕೇಜ್ ಟೂರ್’ ಆರಂಭಿಸುವದಾಗಿ ನಾಯರ್ ತಿಳಿಸಿದ್ದಾರೆ. ಇನ್ನಷ್ಟೇ ಸೇವೆಯ ದಿನ ನಿರ್ಧಾರ ಆಗಬೇಕಿದ್ದು, ತಾವು ನಡೆಸಿದ ಸರ್ವೆಯ ಪ್ರಕಾರ ಪ್ರವಾಸೀ ತಾಣಗಳಾದ ಕೊಡಗು ಹಾಗೂ ಚಿಕ್ಕಮಗಳೂರಿಗೆ ‘ಹೆಲಿಟ್ಯಾಕ್ಸಿ’ ಸೇವೆ ಆರಂಭಿಸಲು ಸಾಧ್ಯವಿದೆ ಎಂದಿದ್ದಾರೆ.