ಮಡಿಕೇರಿ, ಮಾ. 5: ನಗರದ ರಾಜಾಸೀಟ್ ಬಳಿ ವಾಹನ ನಿಲುಗಡೆ ಶುಲ್ಕ ಹೆಸರಿನಲ್ಲಿ ಟೆಂಡರ್‍ದಾರರಿಂದ ವ್ಯಾಪಕ ದಂಧೆ ನಡೆಯುತ್ತಿರುವ ಆರೋಪ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ಶುಲ್ಕ ವಸೂಲಿ ಮಾಡದಂತೆ ನಿರ್ಣಯವನ್ನು ಇಂದಿನ ನಗರಸಭೆಯ ಬಜೆಟ್ ಅಂಗೀಕಾರ ಸಭೆಯು ಕೈಗೊಂಡಿದೆ. ವಿಷಯ ಪ್ರಸ್ತಾಪಿಸಿದ ಮೂಡಾ ಅಧ್ಯಕ್ಷ ಹಾಗೂ ಸದಸ್ಯ ಚುಮ್ಮಿ ದೇವಯ್ಯ ಅವರು, ವಾಹನ ನಿಲುಗಡೆ ಶುಲ್ಕ ನೆಪದಲ್ಲಿ ತಾಜ್, ಕ್ಲಬ್ ಮಹೇಂದ್ರ ಸೇರಿದಂತೆ ಆ ಮಾರ್ಗವಾಗಿ ಸಂಚರಿಸುವ ಎಲ್ಲಾ ವಾಹನಗಳಿಂದ ವಸೂಲಿ ದಂಧೆ ನಡೆಯುತ್ತಿದೆ ಎಂದು ಬೊಟ್ಟು ಮಾಡಿದರು.ಈ ವೇಳೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಹಾಗೂ ಬಿಜೆಪಿಯ ಪಿ.ಡಿ. ಪೊನ್ನಪ್ಪ, ಕೆ.ಎಸ್. ರಮೇಶ್, ಉನ್ನಿಕೃಷ್ಣ ಸೇರಿದಂತೆ ಬಹುತೇಕ ಸದಸ್ಯರು ಯಾವ ಕಾರಣಕ್ಕೂ ರಾಜಾಸೀಟ್ ಮಾರ್ಗದ ಎಲ್ಲಿಯೂ ಶುಲ್ಕ ವಸೂಲಿ ಮಾಡದಂತೆ ಆಗ್ರಹಿಸಿದರು. ಎಸ್‍ಡಿಪಿಐ ಸದಸ್ಯ ಅಮಿನ್ ಮೊಯ್ಸಿನ್ ಈ ಶುಲ್ಕದಿಂದ ನಗರಸಭೆ ಆದಾಯ ಹೆಚ್ಚಲಿದೆ ಎಂದು ಸಮರ್ಥಿಸಿದರಾದರೂ, ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಬಹುಮತದ ನಿರ್ಣಯಕ್ಕೆ ಅಂಗೀಕಾರ ನೀಡಿದರು.
ಪ್ರವಾಸಿಗರು ಮತ್ತು ನಿತ್ಯ ನಗರದಲ್ಲಿ ಸಂಚರಿಸುವ ಜನತೆಯ ಹಿತದೃಷ್ಟಿಯಿಂದ ರಾಜಾಸೀಟ್ ಮಾರ್ಗದ ಎಲ್ಲಿಯೂ ಶುಲ್ಕ ವಸೂಲಿ ಬೇಡವೆಂದು ಆಡಳಿತ ಸದಸ್ಯರಾದ ಹೆಚ್.ಎಂ. ನಂದಕುಮಾರ್, ಪ್ರಕಾಶ್ ಆಚಾರ್ಯ, ಜುಲೇಕಾಬಿ ಸಹಿತ ಎಲ್ಲರೂ ಚುಮ್ಮಿ ದೇವಯ್ಯ ಅವರ ನಿಲುವಿಗೆ ಧನಿಗೂಡಿಸಿದರು. ಪೊಲೀಸ್ ಇಲಾಖೆಯಿಂದ ರಾಜಾಸೀಟ್ ಮಾರ್ಗದಲ್ಲಿ ವಾಹನಗಳ ಮುಕ್ತ ಸಂಚಾರ ವ್ಯವಸ್ಥೆ ನಿರ್ವಹಿಸಲಿ ಎಂದು ಸದಸ್ಯರು ಪ್ರತಿಪಾದಿಸಿದರು.
ಟೆಂಡರ್ ಅವಧಿ ಮುಕ್ತಾಯದೊಂದಿಗೆ ಯಾವ ಕಾರಣಕ್ಕೂ ಮರು ಅವಕಾಶ ಕಲ್ಪಿಸದೆ, ಮುಂಗಡ ಪತ್ರದಲ್ಲಿ ಉಲ್ಲೇಖಿಸಿರುವ ಈ ಸಂಬಂಧ
(ಮೊದಲ ಪುಟದಿಂದ) ಆದಾಯ ರೂ. 20 ಲಕ್ಷವನ್ನು ರದ್ದುಗೊಳಿಸಲು ಸಭೆ ನಿರ್ಣಯಿಸಿತು. ನಿನ್ನೆಯಷ್ಟೇ ತನ್ನಿಂದ ಶುಲ್ಕ ವಸೂಲಿಗೆ ಬಂದಿದ್ದಾಗಿ ಉನ್ನಿಕೃಷ್ಣ ಬಹಿರಂಗಗೊಳಿಸಿದರೆ, ಹೊಸ ಬಸ್ ನಿಲ್ದಾಣಕ್ಕೆ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲು ಈ ಮಾರ್ಗದಲ್ಲಿ ನಿಲುಗಡೆ ಶುಲ್ಕ ರದ್ದುಗೊಳಿಸುವದು ಅನಿವಾರ್ಯವೆಂದು ಇತರರು ಪ್ರತಿಪಾದಿಸಿದರು. ಈ ಬಗ್ಗೆ ಒಮ್ಮತದ ನಿರ್ಣಯ ಅಂಗೀಕರಿಸಲಾಯಿತು.
ಅಲ್ಲದೆ ಕಳೆದ ತಾ. 27ರ ಸಭೆಯಲ್ಲಿ ರೂ. 65.87 ಕೋಟಿ 74 ಸಾವಿರದ 96 ರೂ.ಗಳ ಆದಾಯ ದೊಂದಿಗೆ, ರೂ. 62,37,47,063 ವೆಚ್ಚ ಹಾಗೂ ರೂ. 3,50,27,033 ಮೊತ್ತದ ಉಳಿತಾಯ ಬಜೆಟ್‍ಗೆ ಇಂದಿನ ಸಭೆಯಲ್ಲಿ ಕೆಲವು ತಿದ್ದುಪಡಿಗಳೊಂದಿಗೆ ಅಂಗೀಕಾರ ನೀಡಲಾಯಿತು.
ನಗರಸಭೆ ಶಾಲೆಗಳ ಶಿಕ್ಷಕರಿಗೆ ಗೌರವ ಸಂಭಾವನೆ, ಕಸವಿಲೇವಾರಿ ತೆರಿಗೆ ಸಂಗ್ರಹ, ಕಟ್ಟಡಗಳ ಶುಲ್ಕ, ನೆಲಬಾಡಿಗೆ, ಅಕ್ರಮ ಕಟ್ಟಡಗಳ ಸಕ್ರಮಕರಣ, ದಂಡ ವಸೂಲಿ ಮುಂತಾದ ಕುರಿತು ಚರ್ಚೆ ನಡೆಯಿತು.
ಒಟ್ಟಿನಲ್ಲಿ ನಗರಸಭೆಯ ವಾರ್ಷಿಕ ಆದಾಯ ಮತ್ತು ವೆಚ್ಚವನ್ನು ಗಮನದಲ್ಲಿ ಇಟ್ಟುಕೊಂಡು ಜನಪರ ಕೆಲಸಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಇಂದಿನ ಸಭೆ ನಿರ್ಧಾರ ಕೈಗೊಂಡಿತು. ನಗರಸಭೆಯ ಆಡಳಿತವನ್ನು ಡಿಜಿಟಲೀಕರಣ ಗೊಳಿಸುವ ಸಂಬಂಧ ಆಯುಕ್ತೆ ಶುಭ ಪ್ರಸ್ತಾಪಿಸಿದರು. ಈಗಾಗಲೇ ಬೇರೆ ಬೇರೆ ಕಡೆ ಈ ಯೋಜನೆ ಕಲ್ಪಿಸಿರುವ ವ್ಯಕ್ತಿಗೆ ನಗರಸಭೆಗೂ ಯೋಜನೆ ರೂಪಿಸಲು ಅವಕಾಶ ಕುರಿತಂತೆ ಚರ್ಚಿಸಿದರೂ, ಸದಸ್ಯರು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಹಾಗೂ ವಿಪಕ್ಷ ಸದಸ್ಯರು, ನಾಮನಿರ್ದೇಶನ ಸದಸ್ಯರು ಪಾಲ್ಗೊಂಡಿದ್ದ ಸಭೆಯಲ್ಲಿ ಜೆಡಿಎಸ್ ಬೆಂಬಲಿತ ಹಾಗೂ ಒಂದಿಬ್ಬರು, ಇತರರು ಗೈರು ಹಾಜರಾಗಿದ್ದರು.