ಮಡಿಕೇರಿ, ಮಾ. 2: ಪೆರಾಜೆಯ ಗೌಡ ಗ್ರಾಮ ಸಮಿತಿ ಹಾಗೂ ಸುಳ್ಯದ ಗೌಡರ ಯುವ ಸೇವಾ ಸಂಘದ ವತಿಯಿಂದ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ನಿಡ್ಯಮಲೆ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಲ್ಲುಮುಟ್ಲು ಹಾಗೂ ಮೇಲ್ಚೆಂಬು ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ಕುದುಪಜೆ ತಂಡ ಕೂರಮಜಲು ತಂಡದ ವಿರುದ್ಧ 8 ವಿಕೆಟ್‍ಗಳಿಂದ ಜಯ ಸಾಧಿಸಿದರೆ, ಮಾಣಿಚೆಟ್ಟು ತಂಡ ಯಾಪರೆ ತಂಡವನ್ನು 14 ರನ್‍ಗಳ ಅಂತರದಿಂದ ಸೋಲಿಸಿತು. ಪಾಡುಮಜಲು ತಂಡ ಪೀಚೆ ತಂಡದ ವಿರುದ್ಧ 6 ವಿಕೆಟ್‍ಗಳ ಜಯ ಸಂಪಾದಿಸಿದರೆ, ಮೇಲ್ಚೆಂಬು ತಂಡ ಮೊದಲು ಬ್ಯಾಟ್ ಮಾಡಿ 8 ಓವರ್‍ಗಳಲ್ಲಿ ಭರ್ಜರಿ 176 ರನ್ ಕಲೆ ಹಾಕಿತು. ಉತ್ತರವಾಗಿ ಆಡಿದ ಮಾರ್ಪಡ್ಕ ತಂಡವು ಎಲ್ಲ ವಿಕೆಟ್ ಕಳೆದುಕೊಂಡು 78 ರನ್ ಮಾತ್ರ ಗಳಿಸಿ 98 ರನ್‍ಗಳ ಭಾರೀ ಅಂತರದಿಂದ ಸೋಲನುಭವಿಸಿತು. ಕುದುಪಜೆ ತಂಡ ಮಾಣಿಬೆಟ್ಟು ತಂಡದ ವಿರುದ್ಧ 9 ವಿಕೆಟ್‍ಗಳ ಜಯ ಗಳಿಸಿದರೆ, ಕಲ್ಲುಮುಟ್ಲು ತಂಡ ಪಾಡುಮಜಲು ತಂಡದ ವಿರುದ್ಧ 7 ವಿಕೆಟ್‍ಗಳಿಂದ ಗೆಲುವು ಸಾಧಿಸಿತು. ಮೇಲ್ಚೆಂಬು ತಂಡ ಕುದುಪಜೆ ತಂಡದ ವಿರುದ್ಧ 7 ವಿಕೆಟ್‍ಗಳಿಂದ ಜಯ ಗಳಿಸಿತು.