ಗೋಣಿಕೊಪ್ಪ ವರದಿ, ಮಾ. 2: ಕೃಷಿಕರಿಂದ ಕಾಡು ಹಣ್ಣುಗಳ ಉತ್ಪಾದನೆ, ಬಳಕೆ ಮತ್ತು ಮಾರಾಟ ವ್ಯವಸ್ಥೆಯ ಯೋಜನೆಗಳು ಜಾರಿಯಾದರೆ ಕಾಡುಹಣ್ಣುಗಳ ಸಂರಕ್ಷಣೆ ಮೂಲಕ ಆರೋಗ್ಯಕರ ಸಮಾಜವನ್ನು ನೋಡಲು ಸಾಧ್ಯವಿದೆ ಎಂದು ಬಾಗಲಕೋಟೆ ತೋಟಗಾರಿಕಾ ವಿಶ್ವ ವಿದ್ಯಾಲಯದ ನಿವೃತ್ತ ಕುಲಪತಿ ಡಾ. ಎಸ್. ಬಿ. ದಂಡಿನ್ ಹೇಳಿದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಮತ್ತು ಬೆಂಗಳೂರು ತೋಟಗಾರಿಕೆ ಅಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಆಯೋಜಿಸಿರುವ ಪಶ್ಚಿಮ ಘಟ್ಟದ ಕಾಡುಹಣ್ಣುಗಳ ಸಂರಕ್ಷಣೆ ಮತ್ತು ಬಳಕೆ ಕುರಿತಾದ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರಗೋಷ್ಠಿಯಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಕೃಷಿಕರು ಹಾಗೂ ವಿಜ್ಞಾನಿಗಳು ಕೈಜೋಡಿಸುವ ಮೂಲಕ ಕಾಡು ಹಣ್ಣುಗಳ ಸಂರಕ್ಷಣೆಗೆ ಒಂದಾಗಿ ಯೋಜನೆ ರೂಪಿಸಬೇಕು ಎಂದು ಕರೆ ನೀಡಿದರು.

ಕಾಡುಹಣ್ಣುಗಳ ಅಮೂಲ್ಯತೆ, ಅದರಲ್ಲಿರುವ ಔಷಧೀಯ ಗುಣ, ನ್ರೂಟ್ರಿಷಿಯನ್ಸ್ ಇದನ್ನು ಅರಿತು ಕೊಂಡು ಜನರಿಗೆ ಸುಲಭವಾಗಿ ಹಣ್ಣುಗಳು ದೊರೆಯುವಂತಾಗಬೇಕು. ಕಾಡು ಹಲಸು, ಸೇರಿದಂತೆ ಒಂದಷ್ಟು ಹಣ್ಣುಗಳು ಇದೇ ರೀತಿ ಮಾರುಕಟ್ಟೆ ಯಲ್ಲಿ ತನ್ನ ಛಾಪು ಮೂಡಿಸಿವೆ. ಈ ನಿಟ್ಟಿನಲ್ಲಿ ಕಾಡು ಹಣ್ಣುಗಳನ್ನು ಗ್ರಾಮಗಳಲ್ಲಿ ಬೆಳೆದು ಮಾರುಕಟ್ಟೆಯಲ್ಲಿ ದೊರೆಯುವಂತೆ ಮಾಡಬೇಕಿದೆ ಎಂದರು.

ಜನರಿಗೆ ಕಾಡುಹಣ್ಣುಗಳು ಲಭಿಸುತ್ತಿಲ್ಲ ಎಂಬ ಕಾರಣಕ್ಕೆ ಕಾಯಿಲೆಗಳಿಗೆ ಪೂರಕವಾದ ಹಣ್ಣುಗಳನ್ನು ಆಹಾರದ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ. ಇದನ್ನು ತಪ್ಪಿಸಲು ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಆಹಾರವಾಗಿ ಕಾಡುಹಣ್ಣುಗಳ ಬಳಕೆಗೆ ಯೋಜನೆ ರೂಪಿಸುವ ಅವಶ್ಯಕತೆ ಇದೆ. ಇದಕ್ಕೆ ಸರ್ಕಾರ ಪ್ರೋತ್ಸಾಹ ಧನ ನೀಡಿ ಉತ್ತೇಜನ ನೀಡಬೇಕಾಗಿದೆ ಎಂದರು.

ಪಶ್ಚಿಮಘಟ್ಟ ಕಾಡುಗಳಲ್ಲಿ ಸುಮಾರು 50 ಬಗೆಯ ಕಾಡುಹಣ್ಣುಗಳಿವೆ. ಇದನ್ನು ಈ ವ್ಯಾಪ್ತಿಗೆ ಬರುವ ಅರಣ್ಯ ಮಹಾವಿದ್ಯಾಲಯಗಳಿಗೆ ಹಂಚಿಕೆ ಮಾಡುವ ಮೂಲಕ ಹಣ್ಣುಗಳ ಸಂರಕ್ಷಣೆಗೆ ಸರ್ಕಾರ ಯೋಜನೆ ರೂಪಿಸಬೇಕು. ಇದು ದೇಶದ ಆರ್ಥಿಕ ವ್ಯವಸ್ಥೆಗೂ ಪೂರಕವಾಗಲಿದೆ ಎಂದರು.

ಪ್ರಪಂಚದಲ್ಲಿ 4,200 ಬಗೆಯ ಕಾಡುಹಣ್ಣುಗಳಿವೆ. ಎಷಿಯಾ ಪ್ರದೇಶದಲ್ಲಿ 261, ಭಾರತದಲ್ಲಿ 84 ಬಗೆಯ ಹಣ್ಣುಗಳಿವೆ. ಪಶ್ಚಿಮ ಘಟ್ಟ ಕಾಡುಗಳಲ್ಲಿ 25 ಕುಟುಂಬ ಜಾತಿಯಲ್ಲಿ 38 ಪೀಳಿಗೆಯ 50 ಬಗೆಯ ಹಣ್ಣುಗಳನ್ನು ಕಾಣ ಬಹುದಾಗಿದೆ ಎಂದರು. ಕೇವಲ 12 ಆಹಾರ ವಸ್ತುಗಳು ಮಾತ್ರ ಶೇ. 75 ರಷ್ಟು ಆಹಾರವಾಗಿ ಬಳಕೆಯಾಗುತ್ತಿದೆ. ಉಳಿದ ಹಣ್ಣುಗಳು ಜನರಿಗೆ ಲಭಿಸುತ್ತಿಲ್ಲ ಎಂದರು.

ಬೆಂಗಳೂರು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ. ಆರ್. ದಿನೇಶ್ ವೈಲ್ಡ್ ಎಡಿಬ್‍ಲ್ ಫ್ರೂಟ್ಸ್ ಆಫ್ ಕೊಡಗು ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಕಾಡುಹಣ್ಣುಗಳು ವಾಣಿಜ್ಯ ಬೆಳೆಯಾಗಿ ಬೆಳೆಯುವಂತಾದರೆ ಜನರಿಗೆ ಸುಲಭವಾಗಿ ಹಣ್ಣುಗಳು ದೊರೆಯು ವಂತಾಗುತ್ತದೆ. ಪ್ರಾಕೃತಿಕವಾಗಿ ಬೀಜೋತ್ಪಾದನೆಯಾಗುವ ಮೂಲಕ ಪ್ರಾಕೃತಿಕ ಸಂರಕ್ಷóಣೆಯಲ್ಲಿ ಕಾಡುಹಣ್ಣುಗಳು ಪಾತ್ರವಹಿಸುತ್ತಿದೆ. ಹವಾಗುಣ ಸಮತೋಲನ ಕೂಡ ಕಾಡುಹಣ್ಣು ಮರಗಳ ಮೂಲಕ ನಡೆಯುತ್ತಿರುವದು ಪ್ರಕೃತಿ ಸಂರಕ್ಷಣೆಗೆ ಪೂರಕವಾಗಲಿದೆ ಎಂದರು.

ಹಲಸು ಕೂಡ ಕಾಡು ಹಣ್ಣಿನಿಂದ ಬಂದಿರುವ ಜಾತಿಯ ಹಣ್ಣಾಗಿದೆ. ಇದು ಇಂದು ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಪಡೆದುಕೊಂಡು ಆರೋಗ್ಯಕರ ಆಹಾರ ನೀಡುವಂತಾಗಿದೆ. ಹೆಚ್ಚು ವಿಸ್ತಾರಗೊಂಡಷ್ಟು ಅಭಿವೃದ್ಧಿ ಸಾಧ್ಯ ಎಂದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಕುಶಾಲಪ್ಪ ಮಾತನಾಡಿ, ಕಾಡುಹಣ್ಣುಗಳ ರಕ್ಷಣೆಗೆ ಕಾಲೇಜು ಉತ್ಸುಕತೆ ಹೊಂದಿದೆ. ವಿದ್ಯಾರ್ಥಿಗಳು ಉತ್ಸಾಹದಿಂದ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ವಸ್ತು ಪ್ರದರ್ಶನದಲ್ಲಿ ಕೊಡಗಿನಲ್ಲಿ ದೊರೆಯುವ ಕಾಡುಹಣ್ಣುಗಳ ಪ್ರದರ್ಶನ ಮಾಡಲಾಯಿತು. ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ತಂಡದಿಂದ ಸುಮಾರು 40 ಬಗೆಯ ಹಣ್ಣುಗಳು ಪ್ರದರ್ಶನಗೊಂಡವು. ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬೆಳೆದಿರುವ ಹಣ್ಣುಗಳನ್ನು ಪರಿಚಯಿಸಲಾಯಿತು. ಜೇನು, ಕಾಡುಗಳಿಂದ ತಯಾರಿಸುವ ಖಾದ್ಯಗಳು ಪ್ರದರ್ಶನಗೊಂಡವು. ಕಾಡುಹಣ್ಣುಗಳ ಗಿಡಗಳು ಮಾರಾಟಗೊಂಡವು.

ಡಾ. ಎಂ. ಎನ್. ರಮೇಶ್ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಈ ಸಂದರ್ಭ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಮುಖ್ಯ ವಿಜ್ಞಾನಿ ಡಾ. ಪಿ. ಸಿ. ತ್ರಿಪಾಠಿ, ಕಾರ್ಯಕ್ರಮ ಕಾರ್ಯದರ್ಶಿ ಡಾ. ಬಿ. ಎನ್. ಸತೀಶ್ ಹಾಗೂ ವಿಜ್ಞಾನಿ

ಡಾ. ದೇವಗಿರಿ ಉಪಸ್ಥಿತರಿದ್ದರು. ವಿವಿಧ ಭಾಗಗಳಿಂದ ವಿಜ್ಞಾನಿಗಳು ಪಾಲ್ಗೊಂಡಿದ್ದರು.

ವರದಿ : ಸುದ್ದಿಪುತ್ರ