ಕೂಡಿಗೆ, ಮಾ. 2 : ಹೆಬ್ಬಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳಗೋಟೆ, ಮರೂರು, ಚಿನ್ನೇನಹಳ್ಳಿ ವ್ಯಾಪ್ತಿಯಲ್ಲಿ ಕಾಡಾನೆ ಹಿಂಡು ಬೀಡು ಬಿಟ್ಟಿದ್ದು, ಶುಕ್ರವಾರ ಬೆಳಗ್ಗಿನ ಜಾವ ಹಳೆಗೋಟೆ ವ್ಯಾಪ್ತಿಯ ರೈತರ ಹೊಲಗದ್ದೆಗಳಿಗೆ ಲಗ್ಗೆಯಿಟ್ಟು ಬೆಳೆಗಳನ್ನು ನಾಶಪಡಿಸಿವೆ.

ಹಳೆಗೋಟೆ ಗ್ರಾಮದ ರೈತರಾದ ಸ್ವಾಮಿ (ಕುಳ್ಳಯ್ಯ), ದೇವರಾಜ, ಗಣೇಶ್, ಕೇಶವ ಹೇಮಾವತಿ ಎಂಬವರ ಜಮೀನಿನಲ್ಲಿ ಬೆಳೆದಿದ್ದ ಜೋಳ ಬೆಂಡೆಕಾಯಿ, ಕೇನೆ, ಬಾಳೆ ಹಾಗೂ ಮೆಣಸಿನಕಾಯಿ ಹೊಲಕ್ಕೆ ನುಗ್ಗಿರುವ ನಾಲ್ಕು ಕಾಡಾನೆಗಳು ಮತ್ತು ಒಂದು ಮರಿಯಾನೆ ಮೆಕ್ಕೆ ಜೋಳವನ್ನು ತಿಂದು ತುಳಿದು ಲಕ್ಷಾಂತರ ರೂಪಾಯಿಯ ಬೆಳೆಯನ್ನು ನಷ್ಟ ಪಡಿಸಿವೆ.

ಆನೆಗಳು ಹೊಲಗಳಿಗೆ ಲಗ್ಗೆಯಿಟ್ಟಿರುವ ವಿಷಯ ತಿಳಿದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ ಕೂಡಲೇ ಅರಣ್ಯಾಧಿಕಾರಿಗಳು ಗ್ರಾಮಸ್ಥರ ಸಹಕಾರದಿಂದ ಪಟಾಕಿ ಸಿಡಿಸಿ ಕಾಡಿಗೆ ಓಡಿಸಲು ಹರಸಾಹಸ ಪಟ್ಟು ಯಶಸ್ವಿಯಾದರು.

ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ, ಹಾಗೂ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಮಾರ್ಗದರ್ಶನದಲ್ಲಿ ಕಣಿವೆ ಉಪ ವಲಯ ಅರಣ್ಯಾಧಿಕಾರಿ ಎಸ್.ಬಿ.ಸತೀಶ್ ಕುಮಾರ್, ದೇವೇಂದ್ರ, ಬಾಣವಾರ ವಲಯದ ಉಪ ವಲಯ ಅರಣ್ಯಾಧಿಕಾರಿ ಮದನ್‍ನಾಯಕ್ ಹಾಗೂ ವಲಯದ ಸಿಬ್ಬಂದಿಗಳಾದ ರಾಜಪ್ಪ, ರಾಜು, ಗಣೇಶ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಈ ಸಂದರ್ಭ ಕುಶಾಲನಗರ ಗಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನ್ ಗೌಡ ಹಾಗೂ ಸಿಬ್ಬಂದಿಗಳು ಭದ್ರತೆ ಕಲ್ಪಿಸಿದ್ದರು.