ಕುಶಾಲನಗರ, ಮಾ. 3: ಆನೆಕಾಡು ಮೀಸಲು ಅರಣ್ಯದಲ್ಲಿ ಶುಕ್ರವಾರ ಕಂಡುಬಂದ ಬೆಂಕಿ ಅನಾಹುತ ಬಹುತೇಕ ತಹಬದಿಗೆ ಬಂದರೂ ಕಾಡಿನ ನಡುವೆ ಹಲವೆಡೆ ಬೆಂಕಿ ಹೊಗೆಯಾಡುತ್ತಿರುವದು ಮುಂದುವರೆದಿದೆ. ಹೆಚ್ಚಿನ ಅರಣ್ಯ ವ್ಯಾಪ್ತಿಗೆ ಬೆಂಕಿ ಹರಡದಂತೆ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರೂ ಕೆಲವು ಮರಗಳಿಗೆ ಹತ್ತಿಕೊಂಡ ಬೆಂಕಿ ಇನ್ನೂ ಹೊಗೆಯಾಡುತ್ತಿರುವ ದೃಶ್ಯ ಕಂಡುಬಂದಿದೆ.

ಇಲಾಖಾ ಸಿಬ್ಬಂದಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಬೆಂಕಿ ತಗುಲಿದ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಸೋಮವಾರಪೇಟೆ ಉಪವಿಭಾಗದ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ತಿಳಿಸಿದ್ದಾರೆ. ಅಗ್ನಿಶಾಮಕ ಮತ್ತು ತುರ್ತು ಸೇವೆ ವಿಭಾಗದ ಸಿಬ್ಬಂದಿಗಳು ಕಾಡಿನೊಳಗೆ ತೆರಳಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಉದ್ದೇಶಪೂರ್ವಕವಾಗಿ ದುಷ್ಕರ್ಮಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿರುವ ಸಾಧ್ಯತೆಗಳಿದ್ದು ಈ ಬಗ್ಗೆ ಇಲಾಖೆಯಿಂದ ತನಿಖೆ ಕೈಗೊಳ್ಳಲಾಗಿದೆ. ಕಳೆದ ಬಾರಿ ಅತ್ತೂರು ಅರಣ್ಯ ವಿಭಾಗಕ್ಕೆ ಬೆಂಕಿ ಹಾಕಿರುವ ದುಷ್ಕರ್ಮಿಗಳು ಈ ಬಾರಿಯೂ ಮಾಡಿರುವ ಸಾಧ್ಯತೆಗಳು ಅಧಿಕ ಎಂದು ಮಾಹಿತಿ ನೀಡಿದ್ದಾರೆ.