ಮಡಿಕೇರಿ, ಮಾ. 3: ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆಯ ನಿರ್ದೇಶಕರು ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಹುಣಸೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಣಿಕಂಠನ್ (ಐ.ಎಫ್.ಎಸ್.) ಇಂದು ಮಧ್ಯಾಹ್ನ ಹೆಗ್ಗಡದೇವನಕೋಟೆ ವ್ಯಾಪ್ತಿಯ ಡಿ.ವಿ. ಕುಪ್ಪೆ ಎಂಬಲ್ಲಿ ಒಂಟಿ ಸಲಗ ಧಾಳಿಗೆ ಬಲಿಯಾಗಿದ್ದಾರೆ. ಅಲ್ಲಿನ ಕಬಿನಿ ಹಿನ್ನೀರು ಪ್ರದೇಶದ ಕಾಕನಕೋಟೆ ಅರಣ್ಯಕ್ಕೆ ಬೆಂಕಿಬಿದ್ದ ಹಿನ್ನೆಲೆಯಲ್ಲಿ ಅಧಿಕಾರಿ ಮಣಿಕಂಠನ್ ಇಂದು ಬೆಳಿಗ್ಗೆ ಪರಿಶೀಲನೆಗೆ ತೆರಳಿದ್ದಾರೆ.
ಅರಣ್ಯ ಇಲಾಖೆಯ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಿತ, ಅಗ್ನಿ ಶಾಮಕ ದಳದವರೊಂದಿಗೆ ಬೆಂಕಿ ನಿಯಂತ್ರಿಸಲು ಕಾರ್ಯಾಚರಣೆ ನಿರತರೊಂದಿಗೆ ಪಾಲ್ಗೊಂಡಿದ್ದ ಮಣಿಕಂಠನ್, ಎಲ್ಲರನ್ನು ಮಧ್ಯಾಹ್ನದ ಊಟಕ್ಕೆ ಕಳುಹಿಸಿ ತಾವು ಕೂಡ ಕಾಲ್ನಡಿಗೆಯಲ್ಲಿ ಹಿಂದಿನಿಂದ ಹೆಜ್ಜೆ ಹಾಕುತ್ತಿದ್ದರೆಂದು ಪ್ರತ್ಯಕ್ಷ ದರ್ಶಿಗಳು ವಿವರಿಸಿದ್ದಾರೆ.
ಈ ಸಂದರ್ಭ ಕಾಡಿಗೆ ಬೆಂಕಿ ಬಿದ್ದಿದ್ದರಿಂದ ದಿಕ್ಕು ತಪ್ಪಿದ್ದ ಒಂಟಿ ಸಲಗವೊಂದು ಅದೇ ಮಾರ್ಗದಲ್ಲಿ ಹಾದು ಬಂದಿದ್ದು, ಎದುರಿಗೆ ಸಿಕ್ಕ ಅಧಿಕಾರಿ ಮಣಿಕಂಠನ್ ಮೇಲೆರಗಿ ತುಳಿದು ಹಾಕಿದೆ. ಹಿಂದಿನಿಂದ ಅಧಿಕಾರಿಯನ್ನು ಘಾಸಿಗೊಳಿಸಿದ ಒಂಟಿ ಸಲಗ ಇನ್ನೋರ್ವ ಅರಣ್ಯ ವಲಯಾಧಿಕಾರಿ ಸುಬ್ರಮಣಿ ಎಂಬವರನ್ನೂ ಗಾಯಗೊಳಿಸಿದೆ.
ಈ ಹಠಾತ್ ದುರ್ಘಟನೆಯಿಂದ ಇತರರು ಕಿರುಚಿಕೊಂಡಿದ್ದು, ಬೊಬ್ಬೆಕೇಳಿ ಸಲಗ ಗಾಬರಿಯೊಂದಿಗೆ ಅರಣ್ಯದ ಮತ್ತೊಂದು ದಿಕ್ಕಿನಲ್ಲಿ ಸಾಗಿದೆ. ಜೀವನ್ಮರಣ ಸ್ಥಿತಿಯಲ್ಲಿ ಗಂಭೀರ ಘಾಸಿಗೊಂಡಿದ್ದ ಅಧಿಕಾರಿಯನ್ನು ಕೂಡಲೇ ಹೆಗ್ಗಡದೇವನಕೋಟೆ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅಸುನೀಗಿದರೆಂದು ವೈದ್ಯರು ದೃಢಪಡಿಸಿದ್ದಾರೆ.
ಬಳಿಕ ಅರಣ್ಯಾಧಿಕಾರಿಯ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸಾಗಿಸಲಾಯಿತು. ಈ ಘಟನೆ ಸಂಬಂಧ ಅಂತರ್ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಠಾತ್ ಘಟನೆಯಿಂದ ಅಗ್ನಿಜ್ವಾಲೆ ನಿಯಂತ್ರಣಕ್ಕೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಇತರ ಸಿಬ್ಬಂದಿ ಕಂಗಾಲಾಗಿದ್ದಾರೆ.
ಒಂಟಿ ಸಲಗ ಧಾಳಿಯಿಂದ ಸಾವನ್ನಪ್ಪಿರುವ ಅಧಿಕಾರಿ ಮಣಿಕಂಠನ್ ತಮಿಳುನಾಡು ಬಳಿಯ ತೇನಿ ಎಂಬಲ್ಲಿನ ಮೂಲದವರಾಗಿದ್ದಾರೆ. ತಮ್ಮ ವೃತ್ತಿ ಜೀವನವನ್ನು ಮಡಿಕೇರಿ ಅರಣ್ಯ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ 2004-6ರ ಅವಧಿಗೆ ಪ್ರೊಬೆಷನರಿ ಹುದ್ದೆ ನಿರ್ವಹಿಸಿದ್ದರು. ಬಳಿಕ ಕೊಡಗು ಜಿಲ್ಲೆಯಲ್ಲಿ ಸುಮಾರು ಒಂದು ವರ್ಷ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯ ಮಾಡಿದ್ದರು. 2001ನೇ ಸಾಲಿನ ಐಎಫ್ಎಸ್ ಅಧಿಕಾರಿಯಾಗಿದ್ದ ಮಣಿಕಂಠನ್ (44) ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಪ್ರಸಕ್ತ ಹುಣಸೂರು ಕೇಂದ್ರವಾಗಿಟ್ಟುಕೊಂಡು ಸಮಗ್ರ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹುಲಿ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.