ಶ್ರೀಮಂಗಲ, ಮಾ. 3: ಟಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಪ್ರತ್ಯೇಕ ಎರಡು ಹುಲಿ ಧಾಳಿ ಪ್ರಕರಣದಲ್ಲಿ ಎರಡು ಹಸುಗಳು ಬಲಿಯಾಗಿವೆ. ಶುಕ್ರವಾರ ಮುಂಜಾನೆ ಇದೇ ಗ್ರಾಮದ ರೈತ ಚೆಟ್ಟಂಗಡ ರಶಿ ಅವರಿಗೆ ಸೇರಿದ ಹಸು ಮೇಲೆ ದಾಳಿ ನಡೆಸಿದ 24 ಗಂಟೆಯಲ್ಲಿ ಮತ್ತೆ ಎರಡು ಹುಲಿ ಧಾಳಿ ಪ್ರಕರಣ ಗ್ರಾಮದಲ್ಲಿ ನಡೆದಿದ್ದು, ಇದರಿಂದ ಜನರು ತೀವ್ರ ಆತಂಕಗೊಂಡಿದ್ದಾರೆ.

ಶುಕ್ರವಾರ ರಾತ್ರಿ 11.30 ಗಂಟೆಗೆ ಚೆಟ್ಟಂಗಡ ಟಿ.ಭೀಮಯ್ಯ(ನವೀನ್) ಅವರ ಹಸು ಮೇಲೆ ಹುಲಿ ಧಾಳಿ ನಡೆಸಿ ಕೊಂದು ಹಾಕಿದೆ. ಇಲ್ಲಿಂದ 1 ಕಿ.ಮೀ ಅಂತರದಲ್ಲಿ ಚೆಟ್ಟಂಗಡ ಜಿ.ನಂಜಪ್ಪ (ರಾಜ)ಅವರ ಕೊಟ್ಟಿಗೆಯ ಮೇಲೆ ಹುಲಿ ಧಾಳಿ ನಡೆಸಿ ಮತ್ತೊಂದು ಹಸುವನ್ನು ಕೊಂದು ಹಾಕಿ ಸುಮಾರು 300 ಅಡಿ ದೂರಕ್ಕೆ ಎಳೆದೊಯ್ದು ಕೆಲ ಭಾಗವನ್ನು ತಿಂದು ಹಾಕಿದೆ.

ಕಳೆದ 24 ಗಂಟೆಯಿಂದ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಹಸುಗಳ ಮೇಲೆ ಹುಲಿ ಧಾಳಿ ಮಾಡಿರುವ ಮೂರು ಸ್ಥಳಗಳಿಗೆ ಜಿ.ಪಂ ಸದಸ್ಯ ಶಿವು ಮಾದಪ್ಪ ಭೇಟಿ ಮಾಡಿ ಸಂತ್ರಸ್ತ ರೈತರೊಂದಿಗೆ ಚರ್ಚಿಸಿದರು. ಈ ಸಂದರ್ಭ ಡಿಸಿಎಫ್ ಎಂ.ಜಯ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಿವು ಮಾದಪ್ಪ ಹೆಚ್ಚಿನ ಪರಿಹಾರವನ್ನು ಸಂತ್ರಸ್ತ ರೈತರಿಗೆ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಫ್ ಜಯ ಅವರು ಸರ್ಕಾರದ ಆದೇಶದಂತೆ ಪ್ರತಿ ಜಾನುವಾರಿಗೆ ರೂ. ಹತ್ತು ಸಾವಿರ ಪರಿಹಾರ ನೀಡಲು ಅವಕಾಶವಿದೆ. ಹೆಚ್ಚಿನ ಅನುದಾನ ನೀಡಲು ಅವಕಾಶವಿಲ್ಲ. ಆದರೆ ಮೊದಲು 10 ಸಾವಿರ ಪರಿಹಾರವನ್ನು ರೈತರು ಸ್ವೀಕರಿಸಿದ ನಂತರ ಹೆಚ್ಚಿನ ಪರಿಹಾರಕ್ಕಾಗಿ ಮನವಿ ಸಲ್ಲಿಸಿದರೆ ಅದನ್ನು ಪರಿಶೀಲಿಸಿ ವಿಶೇಷ ಪ್ರಕರಣದಡಿ ಪರಿಹಾರ ಒದಗಿಸಲು ಸಾಧ್ಯವಾದರೆ ಪ್ರಯತ್ನಿಸುವದಾಗಿ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಿವು ಮಾದಪ್ಪ ಹಾಗೂ ಸಂತ್ರಸ್ತ ರೈತರು ಈಗಾಗಲೇ ಬಾಳೆಲೆ, ಕೊಟ್ಟಗೇರಿ ಹಾಗೂ ಮಾಯಮುಡಿ ಯಲ್ಲಿ ನಡೆದ ಹುಲಿ ಧಾಳಿ ಪ್ರಕರಣದಲ್ಲಿ ಜಾನುವಾರು ಒಂದಕ್ಕೆ ರೂ 30 ಸಾವಿರ ಪರಿಹಾರ ನೀಡಲಾಗಿದೆ. ಕುಮಟೂರು ಗ್ರಾಮದಲ್ಲಿ ಹುಲಿ ಧಾಳಿಗೆ ತುತ್ತಾದ ಹಸುವಿಗೆ ರೂ 30 ಸಾವಿರ ಪರಿಹಾರ ನೀಡುವ ಭರವಸೆಯನ್ನು ಪೌಲ್ ಅಂಥೋಣಿ ಸ್ಥಳಕ್ಕೆ ಆಗಮಿಸಿ ಭರವಸೆ ನೀಡಿದ್ದರು. ಆದರೆ ನೆಮ್ಮಲೆ ಗ್ರಾಮದಲ್ಲಿ ನಡೆದ ಪ್ರಕರಣಗಳಿಗೆ ಕೇವಲ 10 ಸಾವಿರ ನೀಡುವದಾಗಿ ಹೇಳುತ್ತಿರುವದು ಪರಿಹಾರ ನೀಡುವಿಕೆಯಲ್ಲಿ ತಾರತಮ್ಯ ಮಾಡಿದಂತಾಗುತ್ತದೆ. ಹೆಚ್ಚಿನ ಪರಿಹಾರ ನೀಡದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವಿರೇಂದ್ರ ಹಾಗೂ ಸಿಬ್ಬಂದಿಗಳು ಆಗಮಿಸಿ ಮಹಜರು ನಡೆಸಿದರು. ಪಶು ವೈದ್ಯಾಧಿಕಾರಿ ಬಿ.ಜಿ.ಗಿರೀಶ್ ಅವರು ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭ ಟಿ.ಶೆಟ್ಟಿಗೇರಿ ಗ್ರಾ.ಪಂ ಸದಸ್ಯರಾದ ಚೆಟ್ಟಂಗಡ ರಂಜು ಕರುಂಬಯ್ಯ, ಚೊಟ್ಟೆಯಂಡಮಾಡ ಉದಯ, ಸಾರ್ವಜನಿಕರಾದ ಚೆಟ್ಟಂಗಡ ಸುನಿಲ್, ಕಾಳಿಮಾಡ ಕಿರಣ್, ಕೊಡಗು ವನ್ಯಜೀವಿ ವಿಭಾಗದ ವಾರ್ಡನ್ ಕುಂಞಂಗಡ ಬೋಸ್ ಮಾದಪ್ಪ, ಚೆಟ್ಟಂಗಡ ಮಹೇಶ್ ಮಂದಣ್ಣ, ಚೆಟ್ಟಂಗಡ ಡಾಲಿ ಮತ್ತು ಹಲವರು ಹಾಜರಿದ್ದರು.