ವೀರಾಜಪೇಟೆ, ಫೆ. 28: ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ವತಿಯಿಂದ ಸಾರ್ವಜನಿಕರಿಗೆ ಅಗತ್ಯವಾಗಿರುವಂತಹ ಸಿರಿಧಾನ್ಯಗಳನ್ನು ಪರಿಚಯಿಸುತ್ತಿದ್ದು, ಈ ನಿಟ್ಟಿನಲ್ಲಿ ಸಿರಿಧಾನ್ಯಗಳ ಆಹಾರವನ್ನು ಪ್ರತಿಯೊಬ್ಬರು ಉಪಯೋಗಿಸಿದಲ್ಲಿ ಯಾವದೇ ರೋಗಗಳು ಬಾರದಂತೆ ಆರೋಗ್ಯವನ್ನು ಉತ್ತಮ ರೀತಿ ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ ಇವರ ಸಹಯೋಗದಲ್ಲಿ ಸ್ಥಳೀಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಸಿರಿಧಾನ್ಯಗಳ ಆಹಾರ ಮೇಳ ಹಾಗೂ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಆಹಾರ ಮೇಳವನ್ನು ನಡೆಸುತ್ತಿರುವದರಿಂದ ಗ್ರಾಮೀಣ ಪ್ರದೇಶದಲ್ಲಿ ಕಣ್ಮರೆಯಾಗುತ್ತಿರುವ ಸಿರಿಧಾನ್ಯಗಳ ಬಗ್ಗೆ ಜನರಿಗೆ ಪರಿಚಯಿಸಿದಂತಾಗಿದೆ. ಯೋಜನೆ ವತಿಯಿಂದ ವೀರಾಜಪೇಟೆ ಪಟ್ಟಣದಲ್ಲಿ ಸಿರಿಧಾನ್ಯಗಳ ಬಗ್ಗೆ ಅಂಗಡಿ ಮಳಿಗೆಯನ್ನು ತೆರೆಯುವಂತಾಗಬೇಕು. ಇದರಿಂದ ಧಾನ್ಯಗಳನ್ನು ಕೊಂಡುಕೊಳ್ಳುವವರಿಗೂ ನೆರವಾಗಲಿದೆ ಎಂದರು. ಕೆಲವರು ಅತೀ ಮದ್ಯ ಸೇವನೆಯಿಂದ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಯಾವದೇ ಸರಕಾರ ಬಂದರೂ ಮದ್ಯ ಮಾರಾಟವನ್ನು ನಿಷೇಧಿಸುವದು ಉತ್ತಮ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಧಾನ್ಯಗಳ ಆಹಾರ ಮಳಿಗೆಯನ್ನು ಉದ್ಘಾಟಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮಸ್ಥಳ ಸಿರಿ ಗ್ರಾಮೋದ್ಯೊಗ ಸಂಸ್ಥೆ ಈ ರೀತಿ ಮೇಳವನ್ನು ಹಮ್ಮಿಕೊಂಡಿರುವದರಿಂದ ಮನುಷ್ಯನ ದೇಹಕ್ಕೆ ಉತ್ತಮ ಆರೋಗ್ಯಕರ ಆಹಾರ ಪದ್ಧತಿಯನ್ನು ಸಾರ್ವಜನಿಕರಿಗೆ ಪರಿಚಯಿಸಿದಂತಾಗಿದೆ. ಸಿರಿಧಾನ್ಯಗಳು ಸಕ್ಕರೆ ಕಾಯಿಲೆ ಹಾಗೂ ಕೊಲೆಸ್ಟ್ರಾಲ್ ಇತ್ಯಾದಿಗಳನ್ನು ನಿಯಂತ್ರಿಸಲಿವೆ. ಇದರ ಬಗ್ಗೆ ಇನ್ನು ಹೆಚ್ಚು ಜನರಿಗೆ ಪರಿಚಯಿಸುವಂತಾಗಬೇಕು ಎಂದರು.

ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಮಡಿಕೇರಿ ಹಾಗೂ ವೀರಾಜಪೇಟೆ ಯೋಜನಾಧಿಕಾರಿ ಸದಾಶಿವ ಗೌಡ ಮಾತನಾಡಿ, ಯೋಜನೆ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಈ ಸಂದರ್ಭ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳ ಮಕ್ಕಳ ಶಿಕ್ಷಣಕ್ಕೆ ಅನುಕೂಲ ವಾಗಲೆಂದು ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಮುಂದೆ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದರು. ಈ ಸಂದರ್ಭ ಅತಿಥಿಗಳು ವಿದ್ಯಾರ್ಥಿ ವೇತನವನ್ನು ವಿತರಿಸಿದರು. ವೇದಿಕೆಯಲ್ಲಿ ವೀರಾಜಪೇಟೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಎ.ಜೆ. ರೀನಾ ಹಾಗೂ ಮಹಿಳಾ ಸಮಾಜದ ಅಧ್ಯಕ್ಷೆ ಕುಸುಮ ಸೋಮಣ್ಣ, ಯೋಜನೆಯ ಗ್ರಾಮೋದ್ಯೋಗ ಸಂಸ್ಥೆಯ ಪ್ರಾದೇಶಿಕ ಮಾರುಕಟ್ಟೆ ಅಧಿಕಾರಿ ಹರೀಶ್ ಸಭೆಯಲ್ಲಿ ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ಮೇಲ್ವಿಚಾರಕ ರವಿಂದ್ರ ಸ್ವಾಗತಿಸಿ, ನಿರೂಪಿಸಿದರು. ಆಹಾರ ಮೇಳ ಪ್ರದರ್ಶನ-ಮಾರಾಟ ಮೇಳದಲ್ಲಿ ಯೋಜನೆಯ ಸದಸ್ಯರು ಭಾಗವಹಿಸಿದ್ದರು.