ಸೋಮವಾರಪೇಟೆ, ಫೆ. 28: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ಕುರಿ, ಕೋಳಿ, ಹಂದಿ ಮಾಂಸ ಮಾರಾಟ ಮಳಿಗೆ ಹಾಗೂ ವಿವಿಧ ಸುಂಕ ಎತ್ತಾವಳಿಗಳು ಕಳೆದ ವರ್ಷಕ್ಕಿಂತ 95 ಸಾವಿರ ರೂ. ಹೆಚ್ಚುವರಿಗೆ ಹರಾಜಾಗಿದೆ.

ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ಸಂತೆ ಸುಂಕ ಎತ್ತಾವಳಿ ಕಳೆದ ವರ್ಷ 8,62,000 ಸಾವಿರಕ್ಕೆ ಹರಾಜಾಗಿದ್ದರೆ, ಈ ವರ್ಷ 8,75,000ಕ್ಕೆ ನೀಡಲಾಗಿದೆ.

3 ಮಳಿಗೆಗಳಿರುವ ಕುರಿ ಮಾಂಸ ಮಾರುಕಟ್ಟೆ ಕಳೆದ ವರ್ಷ 1,71,000 ರೂ.ಗಳಿಗೆ ನೀಡಲಾಗಿದ್ದರೆ ಈ ವರ್ಷ 1,84,000ಕ್ಕೆ ಹರಾಜಾಗಿದೆ. ಬಸ್ ನಿಲ್ದಾಣದ ಶುಲ್ಕ ಗುತ್ತಿಗೆಯನ್ನು ಕಳೆದ ವರ್ಷ 33,500ಕ್ಕೆ ನೀಡಲಾಗಿದ್ದರೆ ಈ ವರ್ಷ 2 ಸಾವಿರ ಕಡಿಮೆಗೆ(31500) ಹರಾಜಾಗಿದೆ.

ಹಂದಿ ಮಾಂಸ ಮಾರುಕಟ್ಟೆ ಕಳೆದ ವರ್ಷ 1,50,000, ಈ ವರ್ಷ 1,60,000ಕ್ಕೆ ಹರಾಜಾಗಿದೆ. 3 ಕೋಳಿ ಮಾಂಸ ಮಾರಾಟ ಮಳಿಗೆಗಳು ಕಳೆದ ವರ್ಷ 6,47,000ಕ್ಕೆ ವಿತರಿಸಲಾಗಿದ್ದರೆ ಈ ವರ್ಷ 6,53,000ಕ್ಕೆ ಹರಾಜಾಗಿದೆ.

3 ಹಸಿಮೀನು ಮಾರುಕಟ್ಟೆ ಮಳಿಗೆಗಳ ಹರಾಜಿನಿಂದ ಕಳೆದ ವರ್ಷ 6,20,000 ರೂ. ಪಂಚಾಯಿತಿಗೆ ಲಭಿಸಿದ್ದರೆ ಈ ವರ್ಷ 6,75,000ಗಳಿಗೆ ಹರಾಜಾಗಿದೆ. ಇದರಲ್ಲಿ 11 ನೇ ಮಳಿಗೆಯನ್ನು ಕಳೆದ ವರ್ಷ 1,81,000 ರೂಪಾಯಿಗಳಿಗೆ ಹರಾಜು ಮಾಡಲಾಗಿದ್ದರೆ ಈ ವರ್ಷ 1,51,000ಗಳಿಗೆ ಹರಾಜಾಗಿದ್ದು, ಕಳೆದ ವರ್ಷಕ್ಕಿಂತ ರೂ. 30 ಸಾವಿರ ಕಡಿಮೆಯಾಗಿದೆ.

ಒಟ್ಟಾರೆ ಕಳೆದ ವರ್ಷ ಮಳಿಗೆಗಳ ಹರಾಜಿನಿಂದ ಪಟ್ಟಣ ಪಂಚಾಯಿತಿಗೆ 24,83,500ರೂ. ಆದಾಯ ಲಭಿಸಿದ್ದರೆ, ಈ ವರ್ಷ 25,78,500ರೂ.ಗಳಿಗೆ ಹರಾಜಾಗುವ ಮೂಲಕ 95 ಸಾವಿರ ಹೆಚ್ಚುವರಿ ಹಣ ಬಂದಂತಾಗಿದೆ.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ, ಸದಸ್ಯರುಗಳಾದ ಬಿ.ಎಂ. ಸುರೇಶ್, ಕೆ.ಎ. ಆದಂ, ಶೀಲಾ ಡಿಸೋಜ, ಮೀನಾಕುಮಾರಿ, ಇಂದ್ರೇಶ್, ನಾಗರಾಜ್ ಸೇರಿದಂತೆ ಪ.ಪಂ. ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.