ಮಡಿಕೇರಿ, ಫೆ. 28 : ದ್ವಿತೀಯ ಪಿಯು ಪರೀಕ್ಷೆ ಮಾರ್ಚ್ 1 ರಿಂದ (ಇಂದಿನಿಂದ) ಮಾ. 17 ರವರೆಗೆ ನಡೆಯಲಿದ್ದು, ಜಿಲ್ಲಾಡಳಿತ ಅಗತ್ಯ ತಯಾರಿ ಮಾಡಿಕೊಂಡಿದೆ. ಜಿಲ್ಲೆಯಲ್ಲಿ 6210 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬಾಲಕಿಯರು 3251 ಮತ್ತು 2959 ಬಾಲಕರು ಪರೀಕ್ಷೆ ಬರೆಯಲಿದ್ದಾರೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಸುಗಮವಾಗಿ ನಡೆಸುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರಡಿ ದತ್ತವಾದ ಅಧಿಕಾರದಂತೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿಷೇಧಿತ ಸ್ಥಳ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಘೋಷಿಸಿ ಆದೇಶಿಸಿದ್ದಾರೆ. ಈ ಆದೇಶವು ಪರೀಕ್ಷಾ ದಿನಗಳಂದು ಬೆಳಿಗ್ಗೆ 9.15 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಜಾರಿಯಲ್ಲಿ ರುತ್ತದೆ ಎಂದು ಅವರು ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರಗಳು : ಗೋಣಿಕೊಪ್ಪಲುವಿನ ಕಾವೇರಿ ಪದವಿ ಪೂರ್ವ ಕಾಲೇಜು, ನಾಪೋಕ್ಲುವಿನ ಸರಕಾರಿ ಪದವಿ ಪೂರ್ವ ಕಾಲೇಜು, ಪೊನ್ನಂಪೇಟೆಯ ಸರಕಾರಿ

ಪದವಿ ಪೂರ್ವ ಕಾಲೇಜು, ಸೋಮವಾರಪೇಟೆಯ ಸರಕಾರಿ ಪದವಿ ಪೂರ್ವ

(ಮೊದಲ ಪುಟದಿಂದ) ಕಾಲೇಜು, ವೀರಾಜಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜು, ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜು, ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜು, ಮೂರ್ನಾಡು ಪದವಿ ಪೂರ್ವ ಕಾಲೇಜು, ಚೇರಂಬಾಣೆ ಅರುಣಾ ಪದವಿ ಪೂರ್ವ ಕಾಲೇಜು, ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜು, ಶ್ರೀಮಂಗಲ ಪದವಿ ಪೂರ್ವ ಕಾಲೇಜು, ಶನಿವಾರಸಂತೆ ಪದವಿ ಪೂರ್ವ ಕಾಲೇಜು, ಮಡಿಕೇರಿ ಸಂತ ಮೈಕಲರ ಪದವಿ ಪೂರ್ವ ಕಾಲೇಜು, ನೆಲ್ಯಹುದಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜು, ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜು, ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು ಈ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಅವಧಿಯ ನಿಷೇಧಿತ ವಲಯದಲ್ಲಿ ಯಾವದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡುವದು, ಚೀಟಿ ಅಥವಾ ಇನ್ನೀತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವದು ಅಥವಾ ಇನ್ನಾವುದೇ ವಸ್ತುಗಳನ್ನು ಹಂಚುವದು, ರವಾನಿಸುವದು ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಿದೆ.

ಯಾವದೇ ರೀತಿಯ ಸ್ಫೋಟಕ ವಸ್ತುಗಳನ್ನು ಕೊಂಡು ಹೋಗುವದು ಹಾಗೂ ಇನ್ನೀತರ ಮಾರಕ ಆಯುಧಗಳನ್ನು ಹೊಂದುವದನ್ನು ಪರೀಕ್ಷೆಗೆ ಸಂಬಂಧಿಸಿದ ಯಾವದೇ ವಿಷಯಗಳ ಮಾಹಿತಿಯನ್ನು ರವಾನಿಸುವ ಅಥವಾ ತಿಳಿಸುವ ಸಲುವಾಗಿ ಸಂಜ್ಞೆ ಮಾಡುವದು ಹಾಗೂ ಮತ್ತಿತರ ಕ್ರಿಯೆಗಳಲ್ಲಿ ತೊಡಗುವದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿಯವರೆಗೆ ಪರೀಕ್ಷಾ ಕೇಂದ್ರಗಳಿಂದ 200 ಮೀಟರ್ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸುವದನ್ನು ಮತ್ತು ಈ ವ್ಯಾಪ್ತಿಯಲ್ಲಿ ಯಾವದೇ ಸಭಾ ಕಾರ್ಯಕ್ರಮ ಮತ್ತು ಧ್ವನಿವರ್ಧಕ ಬಳಸುವದನ್ನು ನಿಷೇಧಿಸಿದೆ.