ಸಿದ್ದಾಪುರ, ಮಾ. 1: ಕಾಡಾನೆ ಧಾಳಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ಕಾರ್ಮಿಕನೋರ್ವ ನಿಗೆ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ವೈಯಕ್ತಿಕ 10,000 ರೂ. ನೆರವು ನೀಡಿ ಮಾನವೀಯತೆ ಮೆರೆದರು.ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಮೈಲಾತ್‍ಪುರ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸ ಮಾಡಿಕೊಂಡಿರುವ ಕಾರ್ಮಿಕ ರಮೇಶ ಎಂಬಾತ ಎರಡು ವರ್ಷಗಳ ಹಿಂದೆ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದ ಕಾಡಾನೆ ಧಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಕಾಡಾನೆ ಧಾಳಿಯಿಂದ ಅಂಗವೈಫಲ್ಯಗೊಂಡಿರುವ ರಮೇಶ್‍ಗೆ ಅರಣ್ಯ ಇಲಾಖೆ ಯಾವದೇ ರೀತಿಯಲ್ಲಿ ಸ್ಪಂದಿಸದೇ ಹಾಗೂ ಪರಿಹಾರವನ್ನು ನೀಡದಿರುವದನ್ನು ಖಂಡಿಸಿ ಜೆ.ಡಿ.ಎಸ್. ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಮೈಲಾತ್‍ಪುರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಕ್ಷದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಂಕೇತ್ ಪೂವಯ್ಯ ಮಾತನಾಡಿ, ಕೂಡಲೇ ಅರಣ್ಯ ಇಲಾಖೆಯು ರಮೇಶನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ರಮೇಶನ ಕುಟುಂಬ ಅರಣ್ಯ ಸಚಿವರ ವಿರುದ್ಧ ಹಾಗೂ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿಯ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿದಲ್ಲಿ ನ್ಯಾಯಾಲಯದ ಸಂಪೂರ್ಣ ಖರ್ಚು ವೆಚ್ಚಗಳನ್ನು ಜೆ.ಡಿ.ಎಸ್. ಪಕ್ಷವು ಭರಿಸುತ್ತದೆ ಎಂದು ಸಂಕೇತ್ ತಿಳಿಸಿದರು.

ಈ ಸಂದರ್ಭದಲ್ಲಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆ.ಡಿ.ಎಸ್. ಅಧ್ಯಕ್ಷ ಮತೀನ್, ಪಕ್ಷದ ಹಿರಿಯ ಮುಖಂಡ ನಾಣಯ್ಯ, ಜೆ.ಡಿ.ಎಸ್. ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ, ಪಕ್ಷದ ಮುಖಂಡರುಗಳಾದ ಶಿವದಾಸ್, ಪಿ.ಎ. ಮಂಜುನಾಥ್, ಅಮ್ಮಂಡ ವಿವೇಕ್, ಪಂದ್ಯಂಡ ರವಿ ಮಾದಪ್ಪ, ದೇವರಾಜ್, ನಾಶಿರ್, ಸೋಮಯ್ಯ, ಪಿ.ವಿ. ರೆನ್ನಿ, ನಾಗಮ್ಮ, ಎಂ.ಎ. ಯಮುನಾ ಇತರರು ಹಾಜರಿದ್ದರು.