ಮಡಿಕೇರಿ, ಫೆ. 28: ಕಾಂಚಿ ಕಾಮಕೋಟಿ ಪೀಠದ ಹಿರಿಯ ಯತಿ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ (82) ಅವರು ಇಂದು ಬೆಳಿಗ್ಗೆ ಚೆನ್ನೈನಲ್ಲಿ ಅಸ್ತಂಗತರಾದರು.ಎರಡು ತಿಂಗಳ ಹಿಂದೆ ಪಾಶ್ರ್ವವಾಯು ಸಂಬಂಧ ಖಾಸಗಿ ಆಸ್ಪತ್ರೆ ಸೇರಿದ್ದ ಅವರು ಇಂದು ಮುಂಜಾನೆ ಹೃದಯಾಘಾತದಿಂದ ದೇಹ ತ್ಯಜಿಸಿದರು.ಕೊಡಗಿಗೆ ಭೇಟಿ: ಸದಾ ಸುದ್ದಿಯಲ್ಲಿ ಇರುತ್ತಿದ್ದ ಜಯೇಂದ್ರ ತೀರ್ಥರು ತಪಸ್ವಿ ಶ್ರೀ ಚಂದ್ರಶೇಖರ ಭಾರತಿ ಅವರಿಂದ ಪಟ್ಟದ ಶಿಷ್ಯರಾಗಿ ಹತ್ತೊಂಭತನ್ನೇ ವಯಸ್ಸಿನಲ್ಲೇ ಹೆಸರಿಸಲಾಗಿತ್ತು. 1987ರ ಆಗಸ್ಟ್ ತಿಂಗಳಿನಲ್ಲಿ ಮಠದಲ್ಲಿ ಅಸಮಾಧಾನ ಹೊಂದಿದ ಅವರು ಕೆಲವೇ ಆಪ್ತರೊಂದಿಗೆ ಮಠ ತೊರೆದು ಕಣ್ಮರೆಯಾದರು. ಪ್ರಭಾವೀ ಮಠ ಕಾಂಚಿ ಕಾಮಕೋಟಿಯ ಯತಿ ಕಾಣೆಯಾದುದು ದೇಶದಾದ್ಯಂತ ಅವರ ಅನುಯಾಯಿಗಳಲ್ಲಿ ಆಘಾತ, ಕಸಿವಿಸಿ ತಂದಿತ್ತು. ಆಗಿನ ರಾಷ್ಟ್ರಪತಿ ದಿ. ಆರ್. ವೆಂಕಟರಾಮನ್ ಹಾಗೂ ಪ್ರಧಾನಿ ದಿ. ರಾಜೀವ್ ಗಾಂಧಿ ಸ್ವಾಮೀಜಿಯನ್ನು ಹುಡುಕಲು ಸರಕಾರಿ ಯಂತ್ರವನ್ನು ಚುರುಕುಗೊಳಿಸಿದ್ದರು.
‘ಶಕ್ತಿ’ಗೆ ಕುರುಹು: ಆಗಸ್ಟ್ 26 ಸಂಜೆ ತಲಕಾವೇರಿಯಿಂದ ‘ಶಕ್ತಿ’ಗೆ ಕರೆ ಬಂದಿತು. ‘ಒಬ್ಬರು ತಪಸ್ವಿಯಂತೆ ಕಾಣುವ ಸ್ವಾಮೀಜಿ, ಕೆಲವು ಶಿಷ್ಯರೊಂದಿಗೆ
(ಮೊದಲ ಪುಟದಿಂದ) ಕೈಲಾಸಾಶ್ರಮಕ್ಕೆ ಬಂದಿದ್ದಾರೆ. ಅವರು ಯಾರೆಂದು ತಿಳಿದಿಲ್ಲ. ನೀವೊಮ್ಮೆ ಬಂದು ನೋಡಿ’ ಎಂದು ಕರೆ ಮಾಡಿದವರು ಹೇಳಿದರು.
ಸ್ವಾಮೀಜಿ ತಲಕಾವೇರಿಯ ಆನಂದ ತೀರ್ಥರು ಹಾಗೂ ಕೈಲಾಸಾಶ್ರಮದ ವಿವೇಕಾನಂದ ಸ್ವಾಮಿಯನ್ನು ಮೊದಲು ಕಂಡರು. ನಿಮಗೆ ಪರಮಾಚಾರ್ಯ ಚಂದ್ರಶೇಖರ ಭಾರತಿಯನ್ನು ಗೊತ್ತೇ ಎಂದು ಕೇಳಿದರು. ಗೊತ್ತಿದೆ ಎಂದು ಇವರು ಹೇಳಿದಾಗ, ಅವರ ಉತ್ತರಾಧಿಕಾರಿ ಯಾರು ಗೊತ್ತೇ ಎಂದು ಕೇಳಿದ್ದಾರೆ. ಗೊತ್ತಿಲ್ಲ ಎಂದಾಗ, ‘ನಾನು ಜಯೇಂದ್ರ ಸರಸ್ವತಿ, ನನಗೆ ಇಲ್ಲಿ ಆಶ್ರಯ ನೀಡುವಿರಾ? ನಾನು ಮೌನವ್ರತ ಆಚರಿಸಲು ಬಂದಿರುವೆ’ ಎಂದು ಹೇಳುತ್ತಾರೆ.
ಅವರನ್ನು ಕೈಲಾಸಾಶ್ರಮದಲ್ಲೇ ಇರಿಸಿಕೊಳ್ಳಲಾಯಿತು. ಜಯೇಂದ್ರ ಸರಸ್ವತಿ ಅವರನ್ನು ಕಾಣಲು ‘ಶಕ್ತಿ’ಯ ತಂಡ ತೆರಳಿತು. ‘ಅವರು ಮೌನದಲ್ಲಿದ್ದಾರೆ. ಮಾತನಾಡಲು ಸಾಧ್ಯವಿಲ್ಲ’ ಎಂದು ಹೇಳಿದ ಶಿಷ್ಯರು, ಅವರ ಗುರುತನ್ನೂ ದೃಢೀಕರಿಸಲಿಲ್ಲ.
‘ನಾನು ರಾಷ್ಟ್ರೀಯ ಸುದ್ದಿವಾಹಿನಿ ಯುನೈಟೆಡ್ ನ್ಯೂವ್ಸ್ ಆಫ್ ಇಂಡಿಯಾ’ ವರದಿಗಾರನಾದು ದರಿಂದ, ರಾಜ್ಯ ಕಚೇರಿಗೆ ಈ ಬಗ್ಗೆ ಸುದ್ದಿ ಕಳುಹಿಸಿದೆ. ‘ನೀವು ಅವರನ್ನು ಖುದ್ದಾಗಿ ಕಾಣದೆ ನಾವು ಸುದ್ದಿ ಹಾಕುವದಿಲ್ಲ- ಏಕೆಂದರೆ ರಾಷ್ಟ್ರದ ಪ್ರಧಾನಿ, ರಾಷ್ಟ್ರಪತಿ ಎಲ್ಲರೂ ಕಾಯುತ್ತಿರುವದರಿಂದ ಅವರು ನಿಜವಾಗಿಯೂ ಜಯೇಂದ್ರರೇ ಎಂದು ಮೊದಲು ಕಂಡು ಹಿಡಿಯಿರಿ’ ಎಂದು ಯುಎನ್‍ಐ ಕಚೇರಿ ಬೆಂಗಳೂರು, ದೆಹಲಿ, ಚೆನ್ನೈಯಿಂದ ಕರೆಗಳು ಬಂದವು. ಆದರೂ ತಾ. 26ರ ರಾತ್ರಿಯವರೆಗೂ ಜಯೇಂದ್ರರ ಭೇಟಿ ಅಸಾಧ್ಯವಾಯಿತು. ತಾ. 27ರ ಬೆಳಿಗ್ಗೆ ಮತ್ತೆ ತಲಕಾವೇರಿಗೆ ಹೋದೆವು. ಮತ್ತೆ ‘ಸ್ವಾಮೀಜಿ ಮೌನದಲ್ಲಿದ್ದಾರೆ’ ಎಂಬ ಉತ್ತರ. ಅಲ್ಲಿಯ ತನಕ ನಾನು ಸ್ಥಳೀಯ ಪತ್ರಿಕೆಯವನು ಎಂದು ಹೇಳಿಕೊಂಡಿದ್ದೆ. ಬಳಿಕ ನನ್ನ ಯುಎನ್‍ಐ ಪರಿಚಯ ಚೀಟಿ ಕೊಟ್ಟು ಸ್ವಾಮೀಜಿಗೆ ಕೊಡಲು ಹೇಳಿದೆ. ರಾಷ್ಟ್ರಪತಿಗಳು ಸ್ವಾಮೀಜಿಯ ಆರೋಗ್ಯದ ವಿಚಾರದಲ್ಲಿ ತಲೆಬಿಸಿಯಲ್ಲಿದ್ದಾರೆ ಎಂದೆ.
ಒಳ ಹೋದ ಸಹಾಯಕ, ಐದೇ ನಿಮಿಷದಲ್ಲಿ ಹೊರಬಂದರು. ‘ವಾಂಗೊ, ವಾಂಗೊ, ನೀವೊಬ್ರೇ ಬನ್ನಿ’ ಎಂದು ಕರೆದೊಯ್ದರು. ತೆಳು ಗಡ್ಡ ಹೊತ್ತ ಕಳೆಭರಿತ ಮುಖದ ಜಯೇಂದ್ರ ತೀರ್ಥರು ಸಂತಸದ ನಗುಬೀರಿ ಕೂರಲು ಹೇಳಿದರು. ‘ಯುಎನ್‍ಐ ನ್ಯೂವ್ಸ್, ಹಿಂದೂ, ಇಂಡಿಯನ್ ಎಕ್ಸ್‍ಪ್ರೆಸ್ಸಿಗೂ ತಲುಪುತ್ತಾ? ರಾಷ್ಟ್ರಪತಿಗಳಿಗೂ ಗೊತ್ತಾಗುತ್ತಾ’ ಎಂದು ಕೇಳಿದ ಅವರು ಮುಕ್ತವಾಗಿ ಮಾತನಾಡಿದರು.
ಆಶ್ರಮದೊಂದಿಗೆ ಅಸಮಾಧಾನ ವೇನೂ ಇಲ್ಲ. ಆದರೂ ಇಲ್ಲಿ ಅವಕಾಶ ಸಿಕ್ಕರೆ ಆತ್ಮಶಾಂತಿ ಹಾಗೂ ಹಿಂದೂ ಧರ್ಮದ ಸಂಘಟನೆಯನ್ನು ತಲಕಾವೇರಿಯಲ್ಲಿ ಕುಳಿತೇ ಮಾಡುವೆ ಎಂದರು. ಆಶ್ರಮ ಬಿಟ್ಟರೂ ಸನ್ಯಾಸ ಬಿಡುವದಿಲ್ಲ ಎಂದರು.
ರಾಜ್ಯ ಮತ್ತು ರಾಷ್ಟ್ರಕ್ಕೆ ಜಯೇಂದ್ರರ ಅಡಗುತಾಣದ ಪರಿಚಯವಾಯಿತು. ತಾ. 27 ರಂದು ಎಲ್ಲ ರಾಷ್ಟ್ರೀಯ ಪತ್ರಿಕೆಗಳಲ್ಲೂ ಸುದ್ದಿ ಬರುತ್ತಿದ್ದಂತೇ ತಲಕಾವೇರಿಯಲ್ಲಿ ಜನಜಾತ್ರೆ ಆರಂಭವಾಯಿತು. ಭಕ್ತರು, ರಾಜಕಾರಣಿಗಳು, ಅಧಿಕಾರಿಗಳ ಹಿಂಡು ಬಂದು ಸ್ವಾಮೀಜಿಯೊಡನೆ ಮಾತುಕತೆ ಆರಂಭಿಸಿದರು.
ಸ್ವಾಮೀಜಿ ತಲಕಾವೇರಿಯಲ್ಲಿ ಕೊಡಗಿನ ಜನತೆಗೆ ಹೀಗೆ ಕರೆ ಕೊಟ್ಟರು: ಆದಿತ್ಯ ಹೃದಯ’ ಪಠಿಸಿ ಇದರಿಂದ ಸರ್ವ ಕಲ್ಯಾಣವಾಗುತ್ತದೆ ಎಂದು.
ಅಗಸ್ತ್ಯ ಮಹಿರ್ಷಿಗಳು ಕಾವೇರಿಯ ಪತಿ. ಈ ಅಗಸ್ತ್ಯರು ತ್ರೇತಾಯುಗದಲ್ಲಿ ಶ್ರೀರಾಮನು ರಾವಣನ ಸಂಹಾರ ಮಾಡುವ ಮುನ್ನ ಆದಿತ್ಯ ಹೃದಯವನ್ನು ಶ್ರೀ ರಾಮನಿಗೆ ಬೋಧಿಸಿದ್ದರು. ಇಂತಹ ಅಗಸ್ತ್ಯರಿಂದ ಹೊರ ಹೊಮ್ಮಿದ ಸೂರ್ಯನ ಕುರಿತಾದ ಸ್ತುತಿಯನ್ನು ಕೊಡಗಿನ ಜನತೆ ಪಠಿಸಿದರೆ ಒಳಿತಾಗುತ್ತದೆ ಎಂದು ಅವರು ಸಲಹೆ ನೀಡಿದ್ದರು.
ಸದಾ ಹಸನ್ಮುಖಿಯಾಗಿದ್ದರೂ ಕೊನೆಗೊಮ್ಮೆ ಬಿಗುಮುಖ ಮಾಡಿಕೊಂಡ ಜಯೇಂದ್ರರು ‘ನಾನು ಸೆ. 7 ರಂದು ಕಾಂಚಿ ಕೋಟೆ ಪೀಠಕ್ಕೆ ಮರಳಿ ಹೋಗುತ್ತೇನೆ’ ಎಂದು ಕಣ್ಮುಚ್ಚಿ ಕೆಲನಿಮಿಷ ಸ್ತಬ್ಧರಾಗಿ ಕುಳಿತರು. ಕಣ್ಣಿನಿಂದ ಎರಡು ಹನಿ ನೀರು ತೊಟ್ಟಿಕ್ಕಿತು.
ತಾ. 7 ರಂದು ತಲಕಾವೇರಿಗೆ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಹಾಗೂ ಇತರ ರಾಜಕೀಯ ನಾಯಕರುಗಳು, ಹಲವೆಡೆಯ ಸಾಧು ಸಂತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಅದ್ದೂರಿಯಿಂದ ಸ್ವಾಮೀಜಿಯನ್ನು ಬೀಳ್ಕೊಟ್ಟರು.
ಮಡಿಕೇರಿಗೆ ಆಗಮಿಸಿದ ಜಯೇಂದ್ರ ತೀರ್ಥರು ಶ್ರೀ ಓಂಕಾರೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಕೊಳದೆದುರು ಕುಳಿತು ಧ್ಯಾನ ಮಾಡಿದರು. ನಾನಾಗ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷನಾಗಿದ್ದು, ಅಲ್ಲಿಯೇ ಊಟದ ವ್ಯವಸ್ಥೆ ಮಾಡಿ, ಅಲ್ಲಿ ಭಜನಾ ಮಂದಿರವನ್ನು ಅವರಿಂದ ಉದ್ಘಾಟನೆ ಮಾಡಿಸಿದ್ದೆ.
-ಬಿ.ಜಿ. ಅನಂತಶಯನ