ಮಡಿಕೇರಿ, ಫೆ.27 : ಕೇಂದ್ರ ಸರಕಾರದಿಂದ ಅನುಮೋದನೆ ದೊರಕಿದ್ದರೂ, ರಾಜ್ಯ ಸರಕಾರದಿಂದ ತಡೆಹಿಡಿಯಲ್ಪಟ್ಟಿರುವ ಕೊಡವ ಬುಡಕಟ್ಟು ಕುಲದ ಕುಲಶಾಸ್ತ್ರ ಅಧ್ಯಯನ (ಎಥ್ನೋಗ್ರಾಫಿಕ್ ಸರ್ವೆ)ವನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ವತಿಯಿಂದ ಮಾ.1ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುವದು ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿ ಸಂಘಟನೆ ನಡೆಸಿದ ಅವಿರತ ಹೋರಾಟಕ್ಕೆ ಸ್ಪಂದಿಸಿದ ಕೇಂದ್ರ ಸರಕಾರ ಈ ಕುರಿತು ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಕೊಡವರ ಎಥ್ನೋಗ್ರಾಪಿಕ್ ಸರ್ವೆ ನಡೆಸಲು ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಜವಾಬ್ದಾರಿ ವಹಿಸಿತ್ತು. ಆ ಸಂಸ್ಥೆ ವಿದ್ವಾಂಸರನ್ನೊಳಗೊಂಡ ತಂಡದೊಂದಿಗೆ ಕುಲಶಾಸ್ತ್ರ ಅಧ್ಯಯನವನ್ನು ಅಚ್ಚುಕಟ್ಟಾಗಿ ಆರಂಭಿಸಿ 1 ತಿಂಗಳ ಕಾಲ ಸುಸೂತ್ರವಾಗಿ ಅಧ್ಯಯನ ನಡೆಸಿದ್ದರೂ, ಕೆಲವು ಪಟ್ಟಭದ್ರ ಹಿತಾಸಕ್ತಿಯ ಕೊಡವÀ ವಿರೋಧಿಗಳು ಮತ್ತು ದ್ರೋಹಿ ಕೊಡವರ ಕೂಟದ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದರು.
ಕೊಡವರ ಭವಿಷ್ಯದ ಹಿತದೃಷ್ಟಿಯಿಂದ ಚುನಾವಣೆ ನೀತಿ ಸಂಹಿತೆ ಘೋಷಣೆಯಾಗುವ ಮುನ್ನ ರಾಜ್ಯ ಸರಕಾರ ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಿ ಅದನ್ನು ಮುಕ್ತಾಯಗೊಳಿಸಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಬೇಕೆಂದು ಆಗ್ರಹಿಸುವ ನಿಟ್ಟಿನಲ್ಲಿ ಮಾ.1ರಂದು ಪೂರ್ವಾಹ್ನ 10.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ವಿವರಿಸಿದರು.
ಕೊಡವರ ಶಾಸನಬದ್ಧ ಹಕ್ಕಾದ ಬಂದೂಕು ವಿನಾಯಿತಿ ಪತ್ರ (ಎಕ್ಸೆಂಪ್ಷನ್ ಸರ್ಟಿಫಿಕೇಟ್) ನೀಡುವದಕ್ಕೆ ಕೊಡಗು ಜಿಲ್ಲಾಡಳಿತ ವಿನಾ ಕಾರಣ ತಗಾದೆ ಮುಂದುವರಿಸಿದ್ದು, ಇದರಿಂದಾಗಿ ಸಾವಿರಾರು ಅರ್ಜಿಗಳು ಕೊಳೆಯುತ್ತಾ ಬಿದ್ದಿದೆ. ಇದು ಜಿಲ್ಲಾಡಳಿತ ಕೊಡವ ಕುಲಕ್ಕೆ ಮಾಡಿರುವ ಅನ್ಯಾಯವಾಗಿದೆ ಎಂದು ನಾಚಪ್ಪ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಚಂಬಂಡ ಜನತ್ ಹಾಗೂ ಕಾಟುಮಣಿಯಂಡ ಉಮೇಶ್ ಉಪಸ್ಥಿತರಿದ್ದರು.