ಗೋಣಿಕೊಪ್ಪಲು, ಫೆ. 27 : ನಿರುದ್ಯೋಗ ಸಮಸ್ಯೆ ದೇಶವನ್ನು ಕಾಡುತ್ತಿದೆ; ವರ್ಷಕ್ಕೆ ಪದವಿ ಪಡೆದುಕೊಳ್ಳುವವರಿಗಿಂತ ನಿರುದ್ಯೋಗ ಎಂಬ ಕುಲುಮೆಯಲ್ಲಿ ಬೇಯುತ್ತಿರುವವರೇ ಹೆಚ್ಚು. ನಿರುದ್ಯೋಗ ನಿರ್ಮೂಲನೆಗೆ ಸರ್ಕಾರ ನೂರಾರೂ ಯೋಜನೆಗಳನ್ನೆನೋ ತರುತ್ತದೆ ಆದರೆ ಅದರ ಪ್ರಯೋಜನ ಎಷ್ಟರ ಮಟ್ಟಿಗೆ ದೊರಕುತ್ತಿದೆ ಎಂಬ ಯಕ್ಷ ಪ್ರಶ್ನೆ ದೇಶದ ಯುವಕರನ್ನು ಬೆಂಬಿಡದೆ ಕಾಡುತ್ತಿದೆ. ಇದೇ ರೀತಿ ನಿರುದ್ಯೋಗ ನಿರ್ಮೂಲನೆಗೆ ಕರ್ನಾಟಕ ರಾಜ್ಯ ಸರ್ಕಾರ ಕೌಶಲ್ಯ ಕರ್ನಾಟಕ ಯೋಜನೆ ಎಂಬ ಹೊಸ ಯೋಜನೆ ರೂಪಿಸಿದೆ. ರಾಜ್ಯದ ಎಲ್ಲಾ ನಿರುದ್ಯೋಗಿಗಳಿಗೆ ಕೆಲಸ ಕೊಡುವ ದಿಟ್ಟ ಮನಸು ಮಾಡಿದೆ. ಇದೇ ರೀತಿ ಪ್ರತಿ ತಾಲೂಕಿನ ವಿವಿಧೆಡೆ ಪೂರ್ವ ಕಲಿಕಾ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ; ಆದರೆ ಅದೆಲ್ಲಾ ಕಾಟಾಚಾರಕ್ಕೆ ಎಂಬಂತಾಗಿರುವದು ವಿಪರ್ಯಾಸ.

ಪೊನ್ನಂಪೇಟೆ ನಗರದ ಕೈಗಾರಿಕಾ ತರಬೇತಿ ಕಾಲೇಜಿನಲ್ಲಿ ಆಯೋಜಿಸಿದ್ದ ಕೌಶಲ್ಯ ಕರ್ನಾಟಕ ಕಾರ್ಯಕ್ರಮ ಬೆರಳೆಣಿಕೆ ಅಭ್ಯರ್ಥಿಗಳ ನಡುವೆ ನಡೆಯಿತು. ನಿಗದಿಯಾಗಿದ್ದ ಸಮಯಕ್ಕಿಂತ 4 ಗಂಟೆ ತಡವಾಗಿ ಕಾರ್ಯಕ್ರಮ ಪ್ರಾರಂಭಗೊಂಡಿತು. ಅಪರಾಹ್ನ 12 ಗಂಟೆಗೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ 3.45ಗಂಟೆಗೆ ಏಜೆನ್ಸಿ ನೋಂದಣಿಗಾರರು ಆಗಮಿಸಿದರು. ಇದಕ್ಕೂ ಮುನ್ನ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕಾರ್ಯಕ್ರಮಕ್ಕೆ ಆಗಮಿಸಿ ಏಜೆನ್ಸಿಯವರು ಬರುವದು ತಡವಾಗುತ್ತದೆ ಅಲ್ಲಿಯವರಗೆ ಕಾಯಿರಿ ಎಂಬ ಸಬೂಬು ಹೇಳಿ ತಮ್ಮ ಪಾಡಿಗೆ ತೆರಳಿದರು. ಸುಮಾರು 4 ಗಂಟೆಗಳ ಕಾಲ ಕಾಲೇಜು ಕ್ಯಾಂಪಸ್‍ನಲ್ಲೇ ಇದ್ದ ಅಭ್ಯರ್ಥಿಗಳು ಕಾದು ಸುಸ್ತಾದರು. ಸೂಕ್ತ ಮಾಹಿತಿ ಇಲ್ಲದ ಯುವಕರು ಕಾಲಹರಣ ಮಾಡಿದರು. ಅಧಿಕಾರಿಗಳು ಕೂಡ ಹಾಗೇ ಬಂದು ಹೋದರು. ಕಾರ್ಯಕ್ರಮ ಮಾಡಿದ್ದೇವೆ ಎಂದು ಹೇಳಲು ಕಾರ್ಯನಿರ್ವಹಣಾಧಿಕಾರಿ ಎರಡು ಮಾತುಗಳನ್ನಾಡಿ ಫೋಟೋ ತೆಗೆದುಕೊಂಡು ತೆರಳಿದರು. ನಂತರ ಮೈಸೂರಿನಿಂದ ಆಗಮಿಸಿದ 2 ಏಜೆನ್ಸಿಯ ಸಿಬ್ಬಂದಿ ನಿರುದ್ಯೋಗಿ ಯುವಕರನ್ನು ಸಂದರ್ಶಿಸಿದರು.