ಮಡಿಕೇರಿ, ಫೆ. 27: ಪೆರಾಜೆಯಲ್ಲಿ ಗೌಡ ಗ್ರಾಮ ಸಮಿತಿ ಹಾಗೂ ಸುಳ್ಯದ ಗೌಡರ ಯುವ ಸೇವಾ ಸಂಘದ ವತಿಯಿಂದ ಗೌಡ ಕುಟುಂಬಗಳ ನಡುವೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ.ಚೆರಿಯಮನೆ ಹಾಗೂ ಚೆಮ್ನೂರು, ಕಡಪಳ ಹಾಗೂ ಪಡ್ಡಂಬೈಲು, ನೂಜಿಬೈಲು ಹಾಗೂ ಕುಂಬಳಚೇರಿ (ಬಿ) ತಂಡಗಳ ನಡುವೆ ತಾ. 28 ರಂದು (ಇಂದು) ಪಂದ್ಯಾಟ ನಡೆಯಲಿದೆ. ಕಡಪಳ ಹಾಗೂ ಪಡ್ಡಂಬೈಲು ತಂಡಗಳ ನಡುವಿನ ಪಂದ್ಯದಲ್ಲಿ ಗೆಲವು ಸಾಧಿಸುವ ತಂಡದೊಂದಿಗೆ ನಂಗಾರು ತಂಡ ಸೆಣಸಲಿದ್ದು, ನೂಜಿಬೈಲು ಹಾಗೂ ಕುಂಬಳಚೇರಿ ನಡುವಿನ ಪಂದ್ಯದಲ್ಲಿ ಜಯಿಸುವ ತಂಡ ಪೀಚೆ ತಂಡದೊಂದಿಗೆ ಸೆಣಸಲಿದೆ. ತಳೂರು, ಮುದಿಯಾರು, ಕುಂದಲ್ಪಾಡಿ, ನಿಡ್ಯಮಲೆ ತಂಡಗಳು ಈಗಾಗಲೇ ಮುಂದಿನ ಹಂತ ಪ್ರವೇಶಿಸಿವೆ.

ಮೂರು ದಿನಗಳ ಹಿಂದೆ ಆರಂಭವಾದ ಪಂದ್ಯಾಟವನ್ನು ನಿಡ್ಯಮಲೆ ಕುಟುಂಬದ ಮುಖ್ಯಸ್ಥ ಬೋಜಪ್ಪ ನಿಡ್ಯಮಲೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪೆರಾಜೆ ಗೌಡ ಗ್ರಾಮ ಸಮಿತಿಯ ಅಧ್ಯಕ್ಷ ಕುಂಬಳಚೇರಿ ಪದ್ಮಯ್ಯ ವಹಿಸಿದ್ದರು. ಅತಿಥಿಗಳಾಗಿ ಸುಳ್ಯದ ಗೌಡರ ಯುವ ಸೇವಾ ಸಂಘದ ಉಪಾಧ್ಯಕ್ಷ ನಿಡ್ಯಮಲೆ ಜ್ಞಾನೇಶ್, ಪೆರಾಜೆ ಶಾಸ್ತಾವು ದೇವಸ್ಥಾನದ ಆಡಳಿತ ಮೋಕ್ತೇಸರರಾದ ಕುಂಬಳಚೇರಿ ವಿಶ್ವನಾಥ್, ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ ದುಗ್ಗಲಡ್ಕ ಶೀಲಾವತಿ ಮಾಧವ ಮತ್ತಿತರರು ಭಾಗವಹಿಸಿದ್ದರು.