ಮಡಿಕೇರಿ, ಫೆ.27 : ಸಹಕಾರ ಸಂಘಗಳ ಸೌಲಭ್ಯಗಳು ಎಲ್ಲಾ ಜನರಿಗೆ ತಲಪುವಂತಾಗಬೇಕು ಎಂದು ಸಹಕಾರಿ ಪ್ರಶಸ್ತಿ ಪುರಸ್ಕøತರಾದ ಟಿ.ಎಸ್. ನಾರಾಯಣಾಚಾರ್ ತಿಳಿಸಿದರು.

ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆದ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಹಕಾರಿ ಚುನಾವಣೆ ಕುರಿತಾದ ಶಿಕ್ಷಣ, ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದಾನಸಭಾ ಚುನಾವಣೆ ಹತ್ತಿರವಿದೆ. ಸಹಕಾರ ಸಂಘದಲ್ಲೂ ಚುನಾವಣೆ ಹತ್ತಿರ ಬರುತ್ತಿದ್ದು, ಸೂಕ್ಷ್ಮವಾಗಿ ಹಾಗೂ ಪಾರದರ್ಶಕ ವಾಗಿ ಚುನಾವಣೆ ನಡೆಸಬೇಕು. ಈ ಬಾರಿ ನೂರು ಸಹಕಾರಿ ಸಂಘಗಳಿಗೆ ಚುನಾವಣೆ ನಡೆಯಲಿದ್ದು, ಸಹಕಾರ ಸಂಘದಲ್ಲಿರುವವರಿಗೆ ಸಿಇಒಗಳು ತರಬೇತಿ ನೀಡಬೇಕು.

ಸಹಕಾರ ಸಂಘದಲ್ಲಿ ಸೇವೆ ಮಾಡುವವರು ಪ್ರತಿಯೊಬ್ಬರೂ ಸಹಕಾರದ ಕಾನೂನುಗಳನ್ನು ತಿಳಿಯಬೇಕು. ಹಾಗೆಯೇ ಎಲ್ಲಾ ಸಹಕಾರ ಸಂಘದ ಮೇಲೆ ರಾಜಕೀಯ ಹಸ್ತಕ್ಷೇಪವಿದೆ. ಅದು ಕಾನೂನಿನಲ್ಲಿ ಬದಲಾವಣೆಯಾಗಬೇಕು ಮತ್ತು ಸರ್ಕಾರಿ ಹಸ್ತಕ್ಷೇಪದಿಂದ ಮುಕ್ತವಾಗಿ ಸ್ವಯತತ್ತೆ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಟಿ.ಎಸ್. ನಾರಾಯಣಾಚಾರ್ ತಿಳಿಸಿದರು.

ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಎ.ಕೆ.ಮನುಮುತ್ತಪ್ಪ ಮಾತನಾಡಿ ಸಹಕಾರ ಸಂಘಗಳ ಚುನಾವಣೆಯನ್ನು ಬಹಳ ಎಚ್ಚರಿಕೆಯಿಂದ, ನಿಷ್ಪಕ್ಷಪಾತವಾಗಿ ನಡೆಸಬೇಕಿದೆ ಎಂದರು.

ಸಹಕಾರಿ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಲೋಕೇಶ್, ಕೊಡಗು ಜಿಲ್ಲಾ ಸಹಕಾರ ಸಂಘದ ನಿರ್ದೇಶಕರಾದ ಪಿ.ಸಿ.ಅಚ್ಚಯ್ಯ, ಡಿ.ಪಿ.ಬೋಪಣ್ಣ, ಕೆ.ಕೆ.ಮಂದಣ್ಣ, ಸಹಕಾರ ಸಂಘಗಳ ಉಪ ನಿಬಂಧಕರಾದ ಡಿ.ಭಾಸ್ಕರಾಚಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಚ್.ಡಿ.ರವಿಕುಮಾರ್ ಇತರರು ಇದ್ದರು.