ಮಡಿಕೇರಿ, ಫೆ.27 : ರೋಟರಿ ಸಂಸ್ಥೆ ಜನಪರ ಕಾರ್ಯಕ್ರಮಗಳ ಮೂಲಕ ಪರಿಸರದ ಸಮತೋಲನ ಕಾಪಾಡುವದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಕೂಡ ರೂಪಿಸುತ್ತಿದೆಯೆಂದು ರೋಟರಿ ಕ್ಲಬ್ 3181 ರ ರಾಜ್ಯಪಾಲ ಮಾತಂಡ ಸುರೇಶ್ ಚಂಗಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಒಂದು ಮರವನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆÉಗೆ ಕಾಳಜಿ ತೋರಬೇಕೆನ್ನುವ ಅಭಿಲಾಷೆ ರೋಟರಿ ಕ್ಲಬ್‍ನದ್ದು ಎಂದರು. ಈಗಾಗಲೇ ಕ್ಲಬ್ ಮೂಲಕ 1 ಲಕ್ಷ ಮರದ ಸಸಿಗಳನ್ನು ನಾಲ್ಕು ಕಂದಾಯ ಜಿಲ್ಲಾ ವ್ಯಾಪ್ತಿಯಲ್ಲಿ ನೆಟ್ಟು ಬೆಳೆಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಲಕ್ಷಾಂತರ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು, ಸುತ್ತಮುತ್ತಲಿನ ಪರಿಸರದೊಂದಿಗೆ ದೈಹಿಕ ಆರೋಗ್ಯ ಮತ್ತು ಸ್ವಚ್ಛತೆಯ ಅರಿವು ಮೂಡಿಸಲಾಗುತ್ತಿದೆ ಎಂದರು.

ಸುಮಾರು 1836 ಮನೆಗಳಿಗೆ ಸೋಲಾರ್ ಲ್ಯಾಂಪ್ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ ಶೇ. 65 ರಷ್ಟು ಸಾಧನೆಯಾಗಿದೆ. ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿ ರುವ ಕ್ಲಬ್, ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತಿದೆ. ರೋಟರಿ ಮಿಸ್ಟಿ ಹಿಲ್ಸ್‍ಗೆ 13 ವರ್ಷ ತುಂಬಿದ್ದು, ಇದರ ಕಾರ್ಯವೈಖರಿ ತೃಪ್ತಿಕರವಾಗಿದೆಯೆಂದು ತಿಳಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ರೋಟರಿ ಸಂಸ್ಥೆ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ‘ರೋಟರಿ ನಡಿಗೆ ಜನರ ಕಡೆಗೆ’ ಘೋಷ ವಾಕ್ಯದೊಂದಿಗೆ ಸ್ವಚ್ಛ ಪರಿಸರ ಅಭಿಯಾನವನ್ನು ನಡೆಸುತ್ತಿದೆ. ಶಾಲೆಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವದಕ್ಕಾಗಿ ಖ್ಯಾತ ವಿಕ್ರಂ ಜಾದೂಗಾರ ಅವರ ಜಾದೂ ಪ್ರದರ್ಶನದ ಮೂಲಕ ವಿಶಿಷ್ಟ ರೀತಿಯಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಅಂತರಾಷ್ಟ್ರೀಯ ರೋಟರಿ ಯೋಜನೆ ಮೂಲಕ ವಿಜ್ಞಾನ ವಾಹಿನಿ ಕಾರ್ಯಕ್ರಮಕ್ಕೆ ರೋಟರಿ ಜಿಲ್ಲೆಗೆ 23 ಲಕ್ಷ ರೂ. ಬಿಡುಗಡೆಯಾಗಿದ್ದು, ಈಗಾಗಲೇ ವಿಜ್ಞಾನ ವಾಹಿನಿಯ 3 ಸಂಚಾರಿ ವಾಹನಗಳ ಮೂಲಕ 60ಕ್ಕೂ ಹೆಚ್ಚಿನ ಶಾಲೆಗಳಲ್ಲಿ ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕಾರ್ಯಾಗಾರ, ಸಾಧಕರಿಗೆ ಸನ್ಮಾನ, ಮಕ್ಕಳ ದಸರಾದಲ್ಲಿ 600 ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಸೇರಿದಂತೆ ಇನ್ನೂ ಅನೇಕ ಸಾಧನೆಗಳನ್ನು ರೋಟರಿ ಮಿಸ್ಟಿ ಹಿಲ್ಸ್ ಮಾಡಿದೆಯೆಂದು ಅನಿಲ್ ಹೆಮ್ಮೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ, ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕ ಅಧ್ಯಕ್ಷ ಬಿ.ಜಿ. ಅನಂತಶಯನ, ಜಿಲ್ಲಾ ಸಾರ್ಜೆಂಟ್ ಎಟ್ ಆಮ್ರ್ಸ್ ದೇವಣೀರ ತಿಲಕ್ ಹಾಗೂ ಕಾರ್ಯದರ್ಶಿ ಪಿ.ಎಂ. ಸಂದೀಪ್ ಉಪಸ್ಥಿತರಿದ್ದರು.