ಮಡಿಕೇರಿ, ಫೆ. 26: ನಿನ್ನೆ ಮಧ್ಯಾಹ್ನದ ಸುಡುಬಿಸಿಲಿನ ನಡುವೆ ಇಲ್ಲಿನ ಭಗವತಿನಗರ ಹಾಗೂ ಗಾಳಿಬೀಡುವಿನ ಕೂಟುಹೊಳೆ ವ್ಯಾಪ್ತಿಯಲ್ಲಿ ಯಾರೋ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿದ ಪರಿಣಾಮ ಹತ್ತಾರು ಎಕರೆ ಕುರುಚಲು ಪ್ರದೇಶ ಸುಟ್ಟು ಹೋಗಿದೆ.

ಈ ವಿಷಯ ತಿಳಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೇಸಿಗೆಯ ದಿನಗಳಲ್ಲಿ ಕಾಡು ಬೆಂಕಿಗೆ ಆಹುತಿಯಾಗದಂತೆ ಮತ್ತು ಕಿಡಿಗೇಡಿ ಕೃತ್ಯ ಕಂಡುಬಂದರೆ ತಕ್ಷಣ ಗಮನಕ್ಕೆ ತರುವಂತೆ ಅಗ್ನಿಶಾಮಕದಳ ಅಧಿಕಾರಿ ಚಂದನ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ನಿನ್ನೆ ಘಟನೆ ಸಂದರ್ಭ ಭಗವತಿನಗರದ ಖಾಸಗಿ ಜಮೀನಿನಲ್ಲಿ ಕಾಡ್ಗಿಚ್ಚು ಹರಡಿದ್ದರೂ, ಸಂಬಂಧಪಟ್ಟ ಯಾರೊಬ್ಬರ ಸುಳಿವು ಲಭಿಸಿಲ್ಲವೆಂದು ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ ಬಿಸಿಲಿನ ನಡುವೆ ಬೆಂಕಿ ಹತೋಟಿಗೆ ಸಾಧ್ಯವಾದ ಬಗ್ಗೆಯೂ ನಿಟ್ಟುಸಿರು ಬಿಟ್ಟಂತಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.