ಸಿದ್ದಾಪುರ, ಫೆ. 26 : ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ವತಿಯಿಂದ ಇಲ್ಲಿನ ಚರ್ಚ್ ಹಾಲ್‍ನಲ್ಲಿ ಎರಡನೇ ವರ್ಷದ ಪೊಂಗಲ್ ಆಚರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಭಾಗವಹಿಸಿ ಮಾತನಾಡಿ ತಮಿಳು ಭಾಷೆ ಅತ್ಯಂತ ಪುರಾತನವಾಗಿದ್ದು, ಹಲವಾರು ವರ್ಷಗಳ ಇತಿಹಾಸವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತಮಿಳು ಭಾಷಿಕರಿಗೆ ಸರ್ಕಾರದಿಂದ ನ್ಯಾಯ ದೊರಕುತ್ತಿಲ್ಲ. ಶ್ರಮ ಜೀವಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಜನಾಂಗದಲ್ಲಿ ಹಲವಾರು ಪ್ರತಿಭೆಗಳಿದೆ. ಆದರೂ ಜನಾಂಗ ರಾಜಕೀಯವಾಗಿ ತೀರಾ ಹಿಂದುಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಕೊಡಗು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಮಾತನಾಡಿ, ಜನಾಂಗದಲ್ಲಿ ತೀರಾ ಹಿಂದುಳಿದವರಿಗೆ ಸರ್ಕಾರದಿಂದ ಸೂರು ಕಲ್ಪಿಸುವ ಕೆಲಸ ಆಗಬೇಕಾಗಿದೆ ಎಂದರು.ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ ಮಾತನಾಡಿ ಮಡಿಕೇರಿಯಿಂದ ಮಧುರೈಗೆ ಬಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ಸಚಿವರೊಂದಿಗೆ ಚರ್ಚೆ ನಡೆಸಲಾಗುವದು ಎಂದು ಭರವಸೆ ನೀಡಿದರು. ಪ್ರಮುಖರಾದ ಸುರೇಶ್ ಬಿಳಿಗೇರಿ ಮಾತನಾಡಿ ಬಡವರ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಬೇಕಿದೆ. ಜನಾಂಗದವರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ಅಧ್ಯಕ್ಷ ತಿರುಮಾಲ್ ರಾಜ ಮಾತನಾಡಿ ಕೊಡಗು ಜಿಲ್ಲೆಯ ವಿವಿಧೆಡೆ ನೆಲೆಸಿರುವ ತಮಿಳು ಭಾಷಿಕರನ್ನು ಒಂದುಗೂಡಿಸಲು ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಸಮುದಾಯದವರ ಕಷ್ಟ ಸುಖಗಳಿಗೆ ಸಂಘದಿಂದ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಉಸ್ಮಾನ್, ಕಾವೇರಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ನ ವ್ಯವಸ್ಥಾಪಕ ಎಸ್.ಎಸ್. ನಾಗರಾಜು, ಪ್ರಮುಖರಾದ ನಾಚಿಯಪ್ಪನ್, ಕೃಷ್ಣ ಸ್ವಾಮಿ, ಆರ್ಮುಗಂ, ವಾಸು, ಸುಬ್ರಮಣಿ, ಶರಣುಪಿಳೈ, ವಿಶ್ವನಾಥ್ ಮತ್ತಿತರರು ಹಾಜರಿದ್ದರು. ಈ ಸಂದರ್ಭ ಹಾಸ್ಯ ಕಲಾವಿದ ಮಧುರೈ ಮುತ್ತು, ಮಹೇಶ್ ಪಿಳೈ, ವಿಘ್ನೇಶ್ ಎಂ. ಭೂತನಕಾಡು, ಸೇದುರಾಮನ್, ಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ತಮಿಳು ಸಂಘದ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಸಾಂಪ್ರದಾಯಿಕವಾಗಿ ಪೊಂಗಲ್ ಹಬ್ಬ ಆಚರಣೆ ಮಾಡಲಾಯಿತು. ಖ್ಯಾತ ಹಾಸ್ಯ ಕಲಾವಿದ ಮಧುರೈ ಮುತ್ತು ತಂಡದಿಂದ ಹಾಸ್ಯ ಮಂಜರಿ ಪ್ರದರ್ಶನ ನಡೆಯಿತು. ಜನಾಂಗದ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.