ಮಡಿಕೇರಿ, ಫೆ. 26: ಕರ್ನಾಟಕ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ್ ಕುಮಾರ್ ಗರ್ಗ್ ಅವರು ಇಂದು ನಗರದ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಭೇಟಿ ನೀಡುವದರೊಂದಿಗೆ, ಕೊಡಗು ವೃತ್ತದ ಇಲಾಖಾ ಅಧಿಕಾರಿಗಳಿಂದ ಆತ್ಮೀಯ ಬೀಳ್ಕೊಡುಗೆ ಸ್ವೀಕರಿಸಿದರು. ಮಂಗಳೂರಿನಿಂದ ಮಡಿಕೇರಿ ಮೂಲಕ ಮೈಸೂರಿಗೆ ತೆರಳುತ್ತಿದ್ದ ಅಶೋಕ್ ಕುಮಾರ್ ಗರ್ಗ್ ಅವರಿಗೆ ಈ ಸಂದರ್ಭ ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು.
ಇದೇ ತಾ. 28ರಂದು ಸೇವೆಯಿಂದ ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಕೊಡಗು ವೃತ್ತದ ಅರಣ್ಯ ಇಲಾಖೆಯ ಬಳಗದಿಂದ ಈ ಸಮಾರಂಭ ಏರ್ಪಡಿಸಲಾಗಿತ್ತು ಎಂದು ಅಧಿಕಾರಿ ಲಿಂಗರಾಜ್ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಕೊಡಗಿನಲ್ಲಿ ಕಾಡಾನೆ ಸಹಿತ ವನ್ಯಮೃಗ ಹಾವಳಿ ಕುರಿತು ಇಂದು ರಾಜಧಾನಿಯಲ್ಲಿ ನಡೆಯಬೇಕಿದ್ದ ಸಭೆಯು ಕೂಡ ಮೇಲಧಿಕಾರಿಗಳ ಪ್ರವಾಸ ಹಿನ್ನೆಲೆ ಮುಂದೂಡಲ್ಪಟ್ಟಿದ್ದಾಗಿ ಕೊಡಗು ವೃತ್ತ ಸಂರಕ್ಷಣಾಧಿಕಾರಿ ದೃಢಪಡಿಸಿದ್ದಾರೆ.
ಹೀಗಾಗಿ ತಾ. 28ರ ಬಳಿಕ ನೂತನವಾಗಿ ಅಧಿಕಾರ ಹೊಂದಲಿರುವ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಗಮನ ಸೆಳೆದು, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮುಂದುವರಿಸುವದಾಗಿ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊಡಗಿನ ಸಮಸ್ಯೆಗಳ ಕುರಿತು ಕೇಂದ್ರ ಅರಣ್ಯ ಪರಿಸರ ಸಚಿವಾಲಯದ ಗಮನಕ್ಕೆ ಈಗಾಗಲೇ ವಿಷಯ ಮುಟ್ಟಿಸಿರುವದಾಗಿ ಅಧಿಕಾರಿ ಅಶೋಕ್ ಕುಮಾರ್ ಗರ್ಗ್ ಸನ್ಮಾನ ಸಂದರ್ಭ ನೆನಪಿಸಿದ್ದಾಗಿಯೂ ಅವರು ಸುಳಿವು ನೀಡಿದ್ದಾರೆ.