ಕೂಡಿಗೆ, ಫೆ.25 : ಹೆಬ್ಬಾಲೆ ಗ್ರಾಮ ಪಂಚಾಯ್ತಿ ಜಮಾಬಂದಿ ಕಾರ್ಯಕ್ರಮವು ಅಧ್ಯಕ್ಷೆ ಲತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

2016-17ನೇ ಸಾಲಿನ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾಮಗಾರಿಗಳ ವಿವರ ಹಾಗೂ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿಗಳ ವಿಚಾರಗಳನ್ನು ಮತ್ತು ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಸಭೆಗೆ ಮಾಹಿತಿ ನೀಡಿದರು.

ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಸಭೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಸರಿಯಾದ ಕ್ರಿಯಾ ಯೋಜನೆ ರೂಪಿಸದೆ ಹೆಚ್ಚು ಹಣ ಕಾದಿರಿಸದ ಬಗ್ಗೆ ಹಾಗೂ ಜಮಾಬಂದಿ ಕಾರ್ಯಕ್ರಮಕ್ಕೆ ಎರಡು ವಾರ್ಡಿನ ಸದಸ್ಯರು ಸಭೆಗೆ ಹಾಜರಾಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಅಭಿವೃದ್ಧಿ ಅಧಿಕಾರಿ ರಾಕೇಶ್, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಯೋಜನೆಯ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವದು ಎಂದರು. ನೋಡಲ್ ಅಧಿಕಾರಿಯಗಿ ಆಗಮಿಸಿದ್ದ ಸೋಮವಾರಪೇಟೆ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎನ್.ಹೇಮಂತ್‍ಕುಮಾರ್ ಕಡತಗಳನ್ನು ಪರಿಶೀಲಿಸಿ, ಕಾಮಗಾರಿ ನಡೆದ ಸ್ಥಳಗಳನ್ನು ಖುದ್ದು ಪರಿಶೀಲಿಸಿದರು. ಈ ಸಂದರ್ಭ ಸಭೆಯಲ್ಲಿ ಸದಸ್ಯರಾದ ವಿಜಯ್, ಶಿವನಂಜಪ್ಪ, ಸರೋಜಮ್ಮ ಮತ್ತು ಗ್ರಾಮಸ್ಥರು ಇದ್ದರು.