ಸೋಮವಾರಪೇಟೆ, ಫೆ. 25: ಜನ ಸಾಮಾನ್ಯರನ್ನು ಮೌಢ್ಯತೆಯ ಸಂಕೋಲೆಯಿಂದ ಹೊರತರಲು ಕ್ರಾಂತಿಯೋಗಿ ಬಸವಣ್ಣನವರು ಅಪಾರವಾಗಿ ಶ್ರಮಿಸಿದರು ಎಂದು ಬಸವಪಟ್ಟಣ ತೋಂಟದಾರ್ಯ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕೊಡಗು ಪ್ರೆಸ್ ಕ್ಲಬ್ ಹಾಗೂ ಸ್ನಾತಕೋತ್ತರ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಚಿಕ್ಕ ಅಳುವಾರದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ “ವಚನ ಕ್ರಾಂತಿಯ ಪುನರುತ್ಥಾನ’ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಸಮಾರೋಪ ಸಮಾರಂಭದಲ್ಲಿ “ಪ್ರಜಾಧರ್ಮವಾಗಿ ಶರಣಧರ್ಮ’ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಜಾತಿ, ಧರ್ಮ, ಮೌಢ್ಯತೆಯಿಂದ ನಲುಗಿ ಹೋಗಿದ್ದ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಲು ಬಸವಾದಿ ಶರಣರು ಅಪಾರವಾಗಿ ಶ್ರಮಿಸಿದರು ಎಂದರು.

ಸಮಾರಂಭದ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, 12ನೇ ಶತಮಾನದಲ್ಲಿಯೇ ವೈಜ್ಞಾನಿಕ ಸತ್ಯವನ್ನು ಶರಣರು ಕೊಟ್ಟಷ್ಟು ಪರಿಣಾಮಕಾರಿಯಾಗಿ ಬೇರೆ ಯಾರು ಕೊಡಲು ಸಾಧ್ಯವಾಗಿಲ್ಲ. 12ನೇ ಶತಮಾನ ಎನ್ನುವಂತಹದ್ದು ಪ್ರವಾಹದ ಎದುರು ಈಜುವ ಪರಿಸ್ಥಿತಿ ಬಸವಾದಿ ಶರಣರಿಗೆ ಆಗಿತ್ತು ಎಂದರು.

ಸಮಾರಂಭದ ಸರ್ವಾಧ್ಯಕ್ಷ ಪ್ರೊ. ಸಿ.ಎಂ. ಧರ್ಮಪ್ಪ, ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಎ. ಮುರಳೀಧರ್, ರಾಜ್ಯ ಸರ್ಕಾರದ ನಿವೃತ್ತ ಮಾಹಿತಿ ಆಯುಕ್ತ ವಿರೂಪಾಕ್ಷಯ್ಯ ಮಾತನಾಡಿದರು.

ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್, ಪ್ರಧಾನಕಾರ್ಯದರ್ಶಿ ಪ್ರೇಮ್‍ನಾಥ್, ಜಿಲ್ಲಾ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಜಿ.ಎಂ. ಕಾಂತರಾಜು, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮಹದೇವಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಎಸ್.ಎಸ್. ಸುರೇಶ್, ಉದ್ಯಮಿ ಬಿ.ಎಸ್. ಸದಾನಂದ್, ಸೋಮವಾರಪೇಟೆ ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲೇಖನಾ ಧರ್ಮೇಂದ್ರ ಉಪಸ್ಥಿತರಿದ್ದರು.