ಮಡಿಕೇರಿ, ಫೆ. 25 : ನಗರಸಭೆÉಯ ಕಾಂಗ್ರ್ರೆಸ್ ಸದಸ್ಯ ಹೆಚ್.ಎಂ.ನಂದಕುಮಾರ್ ಅವರು ತಮ್ಮ ಅಕ್ರಮಗಳನ್ನು ಮುಚ್ಚಿ ಹಾಕುವದಕ್ಕಾಗಿ ಬಿಜೆಪಿ ಸದಸ್ಯರ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಎಂದು ನಗರಸಭೆಯ ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸದಸ್ಯ ಪಿ.ಡಿ.ಪೊನ್ನಪ್ಪ, ನಗರಸಭಾ ಅಧ್ಯಕ್ಷರ ಕಾರ್ಯ ವೈಖರಿಯನ್ನು ಖಂಡಿಸಿ, ಬಿಜೆಪಿ ಇತ್ತೀಚೆಗೆ ಪ್ರತಿಭಟನೆ ನಡೆಸಿತ್ತು. ಆದರೆ, ಯಾವದಕ್ಕೂ ನೇರವಾಗಿ ಸ್ಪಷ್ಟೀಕರಣ ನೀಡದ ಅಧ್ಯಕ್ಷರು, ಒಂದಿಬ್ಬರು ಸದಸ್ಯರ ಮೂಲಕ ಹೇಳಿಕೆ ನೀಡುತ್ತಿರುವದು ಖಂಡನೀಯ ವೆಂದರು.

ಇದೇ ಜನವರಿ 31 ರಂದು ಸ್ಥಾಯಿ ಸಮಿತಿ ಅಧ್ಯಕ್ಷರ ಅಧಿಕಾರದ ಅವಧಿ ಪೂರ್ಣಗೊಂಡಿದೆ. ನೂತನ ಅಧ್ಯಕ್ಷರ ಆಯ್ಕೆಗಾಗಿ ನಗರಸಭಾ ಅಧ್ಯಕ್ಷರು ದಿನ ನಿಗದಿ ಮಾಡಿ, ವಿಶೇಷ ಸಭೆ ಕರೆಯಬೇಕಾಗಿತ್ತು. ಆದರೆ, ಕಾಂಗ್ರೆಸ್ ಸದಸ್ಯರುಗಳ ನಡುವಣ ಹೊಂದಾಣಿ ಕೆಯ ಕೊರತೆಯಿಂದಾಗಿ ಇನ್ನೂ ಕೂಡ ಸ್ಥಾಯಿ ಸಮಿತಿ ರಚನೆಯಾಗಿಲ್ಲವೆಂದು ಪಿ.ಡಿ.ಪೊನ್ನಪ್ಪ ಟೀಕಿಸಿದರು. ಈ ಬಗ್ಗೆ ಅಧ್ಯಕ್ಷರ ನಿರ್ಲಕ್ಷ್ಯದ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವದೆಂದರು.

ನಂದಕುಮಾರ್ ಅವರಿಗೆ ಸರ್ಕಾರ 3 ಸೆಂಟ್ ಜಾಗ ಮಂಜೂರು ಮಾಡಿದ್ದು, ಇದನ್ನು ಮೀರಿ ಒತ್ತುವರಿ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಇದನ್ನು ಮುಚ್ಚಿ ಹಾಕುವದಕ್ಕಾಗಿ ಬಿಜೆಪಿ ಸದಸ್ಯರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಪಿ.ಡಿ.ಪೊನ್ನಪ್ಪ ಆರೋಪಿಸಿದರು. ಸದಸ್ಯ ಉಣ್ಣಿಕೃಷ್ಣ ಮಾತನಾಡಿ, ಹೆಚ್.ಎಂ.ನಂದ ಕುಮಾರ್ ಅವರು ತಮ್ಮ ಮನೆಯ ಜಾಗಕ್ಕೆ ಸಂಬಂಧಿಸಿದಂತೆ ನಕಲಿ ನಕ್ಷೆ ತಯಾರಿಸಿದ್ದಾರೆ ಎಂದು ಆರೋಪಿಸಿ ನಕ್ಷೆಗಳನ್ನು ಪ್ರದರ್ಶಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ತಮ್ಮ ವಿರುದ್ಧ ಹೆಚ್.ಎಂ.ನಂದಕುಮಾರ್ ಅವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆಯೆಂದು ಸ್ಪಷ್ಟಪಡಿಸಿ ದರು. ತಾನು ಕನ್ನಂಡ ಬಾಣೆಯಲ್ಲಿ ನಿರ್ಮಿಸಿಕೊಂಡಿರುವ ಮನೆಗೆ ಎಲ್ಲಾ ದಾಖಲೆಗಳಿವೆ. ನಗರಸಭೆÉ ಹಾಗೂ ಮೂಡಾದಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಅಧಿಕೃತವಾಗಿ ಲಭ್ಯವಿದೆ ಎಂದರು.

ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಮಾತನಾಡಿ, ಖಾತೆಯೆ ಇಲ್ಲದ ಜಾಗದಲ್ಲಿ ನಾನು ಮನೆ ನಿರ್ಮಿಸಿ ಕೊಂಡಿದ್ದೇನೆ ಎಂದು ನಂದಕುಮಾರ್ ಅವರು ಆರೋಪಿಸಿದ್ದು, ನನ್ನ ತಾಯಿಯ ಹೆಸರಿನಲ್ಲಿರುವ ಜಾಗಕ್ಕೆ ಖಾತೆ ಇದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸದಸ್ಯರು ಹಣ ಪಡೆಯುತ್ತಿರುವ ಬಗ್ಗೆ ನಂದಕುಮಾರ್ ಮಾಡಿರುವ ಆರೋಪ ಸುಳ್ಳಾಗಿದ್ದು, ನಮ್ಮಿಂದ ಏನಾದರೂ ತಪ್ಪಾಗಿದ್ದಲ್ಲಿ ಸಾರ್ವಜನಿಕರೇ ನೇರವಾಗಿ ದೂರು ನೀಡಲಿ ಎಂದು ಪ್ರಕಾಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರುಗಳಾದ ಸವಿತಾ ರಾಕೇಶ್ ಹಾಗೂ ಅನಿತಾ ಪೂವಯ್ಯ ಉಪಸ್ಥಿತರಿದ್ದರು.