ಕುಶಾಲನಗರ, ಫೆ. 25: ಕುಶಾಲನಗರದಲ್ಲಿ ಇತ್ತೀಚೆಗೆ ನಡೆದ ಮಹೇಶ್ ಎಂಬಾತನ ಕೊಲೆ ಪ್ರಕರಣಕ್ಕೆ ಅನೈತಿಕ ಸಂಬಂಧವೇ ಕಾರಣ ಎಂದು ಕುಶಾಲನಗರ ಡಿವೈಎಸ್ಪಿ ಪಿ.ಕೆ. ಮುರಳೀಧರ್ ತಿಳಿಸಿದರು.ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತ ಮಹೇಶನಿಗೆ ಹಾಗೂ ಪತ್ನಿ ಅಶ್ವಿತಾಗೆ ಪ್ರತ್ಯೇಕವಾಗಿ ಅನೈತಿಕ ಸಂಬಂಧಗಳು ಉಂಟಾಗಿರುವದೇ ಈ ಪ್ರಕರಣ ಅಂತ್ಯವಾಗಲು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.ಮಹೇಶನ ಅಂಗಡಿಯಲ್ಲಿ ಕೆಲಸಕ್ಕಿದ್ದ ಮಹೇಶನ ಸೋದರ ಸಂಬಂಧಿ ರಘುವಿನೊಂದಿಗೆ ಅಶ್ವಿತಾಳಿಗೆ ಕಳೆದ 3 ವರ್ಷಗಳಿಂದ ಅನೈತಿಕ ಸಂಬಂಧವಿತ್ತು ಎಂದು ಮಾಹಿತಿ ನೀಡಿದ ಅವರು, ಈ ನಡುವೆ ಮಹೇಶನಿಗೆ ಕೂಡ ಇನ್ನೋರ್ವ ಯುವತಿಯೊಂದಿಗೆ ಇದೇ ರೀತಿ ಸಂಬಂಧಗಳು ಮನಸ್ತಾಪಕ್ಕೆ ಕಾರಣವಾಗಿತ್ತು.
ಮಹೇಶನ ಅನೈತಿಕ ಸಂಬಂಧದ ಬಗ್ಗೆ ಆರೋಪಿ ರಘು ಅಶ್ವಿತಾಳಿಗೆ ಮಾಹಿತಿ ನೀಡಿ ಇಡೀ ಕುಟುಂಬದ ನಡುವೆ ಕಂದಕ ನಿರ್ಮಿಸಿ ಗೊಂದಲ ಉಂಟುಮಾಡಿದ್ದ. ಮಹೇಶ ಅಂತರ್ಜಾತಿ ವಿವಾಹವಾಗಿದ್ದು ಸ್ವಲ್ಪಕಾಲ ಅನ್ಯೋನ್ಯವಾಗಿದ್ದರು. ರಘು ಮೂಲಕ ಇಡೀ ಕುಟುಂಬದ ಶಾಂತಿ ಕದಡಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿಂತೆ ಕೆಲವು ಸಮಯಗಳ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜಿ ತೀರ್ಮಾನಗೊಂಡಿತ್ತು.
ವಿಚಾರಣೆ ಸಂದರ್ಭ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು ರಘು ಮತ್ತು ಅಶ್ವಿತಾಳ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಮಹೇಶನನ್ನು ಮನೆಯಲ್ಲಿ ಕುತ್ತಿಗೆಗೆ ಬೆಲ್ಟ್ ಬಿಗಿದು ಕೊಲೆ ಮಾಡಿರುವದಾಗಿ ಆರೋಪಿಗಳಾದ ರಘು, ಅಶ್ವಿತಾ ಹಾಗೂ ಕಿರಣ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.