ಕುಶಾಲನಗರ, ಫೆ. 25: ತಿರುಮಲ ತಿರುಪತಿ ದೇವಸ್ಥಾನ ಸಮಿತಿಯಿಂದ ಕುಶಾಲನಗರದಲ್ಲಿ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಪೂಜಾ ಕಾರ್ಯಕ್ರಮ ಭಕ್ತಿಯಿಂದ ನಡೆದು ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು.ಕುಶಾಲನಗರದ ಬೈಚನಹಳ್ಳಿ ತಾವರೆಕೆರೆ ಬಳಿಯ ಎಸ್‍ಎಲ್‍ಎನ್ ಟೈಮ್ ಸ್ಕ್ವೇರ್ ಆವರಣದಲ್ಲಿ ನಡೆದ ಕಲ್ಯಾಣೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು. ತಿರುಮಲ ತಿರುಪತಿಯ ಪ್ರಧಾನ ಅರ್ಚಕರಾದ ವೇಣುಗೋಪಾಲ ದೀಕ್ಷಿತ್ ಮತ್ತು ಅನಂತಪದ್ಮನಾಭ ದೀಕ್ಷಿತ್ ನೇತೃತ್ವದ ಅರ್ಚಕರ ತಂಡದಿಂದ ಕಲ್ಯಾಣೋತ್ಸವ ಕಾರ್ಯಕ್ರಮ ನೆರವೇರಿಸಲಾಯಿತು.

ತಿರುಮಲ ತಿರುಪತಿಯ ಅನ್ನಮ್ಮಯ್ಯ ಯೋಜನಾ ಪ್ರಾಧಿಕಾರದ ತಾಳಪಾಕ ಹರಿಸ್ವಾಮಿ ತಂಡದ 40 ಜನರಿಂದ ಕೀರ್ತನಾ ಕಾರ್ಯಕ್ರಮ ಜರುಗಿದವು. ವೇದಪಾರಾಯಣ, ಹರಿಕಥಾ ಕಲಾಕೀರ್ತನೆ ಕಾರ್ಯಕ್ರಮಗಳು ನಡೆದವು.

ಎಸ್‍ಎಲ್‍ಎನ್ ಸಮೂಹ ಸಂಸ್ಥೆಯ ಪ್ರಮುಖರಾದ ಎಸ್‍ಎಲ್‍ಎನ್ ನಾರಾಯಣ, ವಿಶ್ವನಾಥನ್, ಸಾತಪ್ಪನ್, ಕುಶಾಲನಗರ ದೇವಾಲಯಗಳ

(ಮೊದಲ ಪುಟದಿಂದ) ಒಕ್ಕೂಟದ ಪ್ರಮುಖರು, ಪ್ರತಿನಿಧಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸುತ್ತಮುತ್ತಲ ವ್ಯಾಪ್ತಿಯ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಕಲ್ಯಾಣೋತ್ಸವ ಅಂಗವಾಗಿ ಭಕ್ತಾದಿಗಳಿಗೆ ತಿರುಪತಿಯ ಲಾಡು ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.