ಗೋಣಿಕೊಪ್ಪಲು, ಫೆ. 25 : ವಾಣಿಜ್ಯ ನಗರಿ ಗೋಣಿಕೊಪ್ಪಲಿನಲ್ಲಿ ಪ್ರತಿ ಭಾನುವಾರ ಸಂತೆದಿನವಾಗಿದ್ದು, ಜನಜಂಗುಳಿ ಸಾಮಾನ್ಯ. ಕೊಡಗು ಜಿಲ್ಲೆಯ ವಿವಿಧೆಡೆಯಿಂದಲ್ಲದೆ ನೆರೆಯ ಪಿರಿಯಾಪಟ್ಟಣ, ಹುಣಸೂರು, ಮೈಸೂರು ಭಾಗದಿಂದಲೂ ಸೊಪ್ಪು, ತರಕಾರಿ, ದಿನಸಿ ಮಾರಾಟಕ್ಕೆ ಇಲ್ಲಿ ವರ್ತಕರು ಬರುತ್ತಿರುವದು ವಿಶೇಷ.ಗೋಣಿಕೊಪ್ಪಲು ಸಂತೆ ಮಾರುಕಟ್ಟೆಯನ್ನು ಈ ಹಿಂದೆ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಮಾರು ರೂ.11 ಲಕ್ಷ ವೆಚ್ಚದಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆಯನ್ನಾಗಿ ಅಭಿವೃದ್ಧಿ ಪಡಿಸಿ, ಗ್ರಾ.ಪಂ.ಗೆ ವಹಿಸಿಕೊಟ್ಟಿತ್ತು. ಆದರೆ, ಗ್ರಾಮೀಣ ಸಂತೆ ಬದಲಿಗೆ ಬೇರೆ ಉದ್ದೇಶಕ್ಕೆ ಮಾರುಕಟ್ಟೆ

(ಮೊದಲ ಪುಟದಿಂದ) ಬಳಕೆಯಾದ ಹಿನ್ನೆಲೆ ಎಪಿಎಂಸಿ ಕಾರ್ಯದರ್ಶಿಗಳು ಗೋಣಿಕೊಪ್ಪಲು ಗ್ರಾ.ಪಂ.ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಇನ್ನೂ ಇತ್ಯರ್ಥವಾಗಿಲ್ಲ.ಮಾರುಕಟ್ಟೆ ಮಳಿಗೆಯಲ್ಲಿ ತರಕಾರಿ, ಗ್ರಾಮೀಣ ರೈತರ ಉತ್ಪನ್ನ ಹೊರತು ಪಡಿಸಿ, ಹಳೇ ಬಟ್ಟೆ ಮಾರಾಟ ಮಳಿಗೆ, ಚಪ್ಪಲಿ ಮಳಿಗೆ ಇತ್ಯಾದಿ ತಲೆ ಎತ್ತಿರುವದು ವಿವಾದಕ್ಕೆ ಕಾರಣವಾಗಿದ್ದು, ಗ್ರಾಮೀಣ ರೈತರು, ತರಕಾರಿ ವರ್ತಕರು ಮಾರುಕಟ್ಟೆ ರಸ್ತೆ ಬದಿಯಲ್ಲಿಯೇ ಮಾರಾಟ ಮಾಡುವ ಪರಿಸ್ಥಿತಿ ತಲೆದೋರಿದೆ. ಇದೀಗ ಸುಮಾರು ರೂ.5 ಲಕ್ಷ ವೆಚ್ಚದಲ್ಲಿ ಇಲ್ಲಿನ ಮಾರುಕಟ್ಟೆ ವ್ಯಾಪ್ತಿಯಲ್ಲಿಯೇ ಸಾರ್ವಜನಿಕ ಶೌಚಾಲಯ ಕಟ್ಟಿಸಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇದರ ನಡುವೆಯೇ ಶೌಚಾಲಯದ ಸುತ್ತಮುತ್ತಲಿನಲ್ಲಿಯೇ ತರಕಾರಿ ವರ್ತಕರು ಮಾರಾಟ ಮಾಡುತ್ತಿರುವದು ಸಮಸ್ಯೆಗೆ ಕಾರಣವಾಗಿದೆ.

ತರಕಾರಿಯನ್ನು ಹಾದಿ ಬದಿಯಲ್ಲಿಯೇ ಮಾರುತ್ತಿದ್ದು, ಇನ್ನು ಶೌಚಾಲಯ ಸಾರ್ವಜನಿಕರಿಗೆ ಮೀಸಲಿಟ್ಟ ನಂತರ ಇಲ್ಲಿನ ತರಕಾರಿ ಖರೀದಿಸಿ ತಿನ್ನುವದು ಆರೋಗ್ಯಪೂರ್ಣವೇ ಎಂಬದು ಪ್ರಶ್ನೆ?. ಈ ಬಗ್ಗೆ ‘ಶಕ್ತಿ’ ಅಧ್ಯಕ್ಷೆ ಸೆಲ್ವಿ ಹಾಗೂ ಪಿಡಿಓ ಚಂದ್ರಮೌಳಿ ಅವರನ್ನು ಪ್ರಶ್ನಿಸಿದ ಸಂದರ್ಭ ಸುಮಾರು 5-6 ವರ್ತಕರು ಸಾರ್ವಜನಿಕ ಶೌಚಾಲಯ ಆವರಣದಲ್ಲಿ ತರಕಾರಿ ಮಳಿಗೆ ತೆರೆದಿದ್ದು, ತೆರವುಗೊಳಿಸಲಾಗುವದು ಮತ್ತು ಶೌಚಾಲಯ ಸಮೀಪ ಮೇಲ್ಭಾಗದ ಖಾಲಿ ನಿವೇಶನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡ ಲಾಗುವದು ಎಂದು ಮಾಹಿತಿ ನೀಡಿದ್ದಾರೆ. ಖಾಲಿ ನಿವೇಶನವನ್ನು ಶುಚಿಗೊಳಿಸಿ ಮುಂದಿನ ವಾರದಿಂದ ತರಕಾರಿ ವ್ಯಾಪಾರ ಸ್ಥಳಾಂತರಿಸಲು ವರ್ತಕರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

-ವರದಿ: ಟಿ.ಎಲ್.ಶ್ರೀನಿವಾಸ್