ಸೋಮವಾರಪೇಟೆ, ಫೆ. 24: ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬಗ್ಗೆ ಚೌಡ್ಲು ಗ್ರಾಮ ಪಂಚಾಯಿತಿಯ ಪ್ರಮುಖರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗಾಂಧಿನಗರ ಗ್ರಾಮದ ಗೌಡ ಸಮಾಜ ರಸ್ತೆಯಲ್ಲಿ ಜಾಗೃತಿ ಅಭಿಯಾನಕ್ಕೆ ಗ್ರಾ.ಪಂ. ಅಧ್ಯಕ್ಷೆ ವನಜ ಚಾಲನೆ ನೀಡಿದರು. ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಕಸ, ಒಣಕಸ, ಪ್ಲಾಸ್ಟಿಕ್, ಗಾಜು ಇತ್ಯಾದಿಯನ್ನಾಗಿ ವಿಂಗಡಿಸಿ ಶೇಖರಣೆ ಮಾಡಿದ ನಂತರ ಅವುಗಳನ್ನು ಗ್ರಾಮ ಪಂಚಾಯಿತಿ ಮೂಲಕವೇ ವಿಲೇವಾರಿ ಮಾಡುವ ಬಗ್ಗೆ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಪೆಮ್ಮಯ್ಯ ಮಾಹಿತಿ ನೀಡಿದರು.
ಮನೆಗಳಲ್ಲಿ ಉತ್ಪತ್ತಿಯಾಗುವ ಎಲ್ಲಾ ಮಾದರಿಯ ತ್ಯಾಜ್ಯವನ್ನು ಪಂಚಾಯಿತಿಯಿಂದಲೇ ವಾಹನಗಳ ಮೂಲಕ ಸಂಗ್ರಹಿಸಲಾಗುವದು. ಸಾರ್ವಜನಿಕರು ಎಲ್ಲಾ ಕಸವನ್ನು ಒಂದೇ ಕಡೆ ಶೇಖರಣೆಗೊಳಿಸಿದರೆ ಅಂತಹ ತ್ಯಾಜ್ಯವನ್ನು ಸಂಗ್ರಹಿಸುವದಿಲ್ಲ. ಈ ಹಿನ್ನೆಲೆ ಹಸಿ ಕಸ, ಒಣಕಸ, ಪ್ಲಾಸ್ಟಿಕ್, ಗಾಜುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಕಸವನ್ನು ವಿಂಗಡಿಸಿ ನೀಡುವದರಿಂದ ಗ್ರಾಮದ ಸ್ವಚ್ಛತೆಯನ್ನು ಕಾಪಾಡಬಹುದಾಗಿದೆ. ಹಸಿ ಕಸವನ್ನು ಪಂಚಾಯಿತಿಯ ವತಿಯಿಂದಲೇ ನಿರ್ವಹಿಸಲ್ಪಡುವ ಗೊಬ್ಬರ ತಯಾರಿಕಾ ಘಟಕಕ್ಕೆ ಬಳಸಿಕೊಳ್ಳಲಾಗುವದು ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಮೇಶ್ ತಿಳಿಸಿದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ನಾಗಮ್ಮ, ಸದಸ್ಯರಾದ ನತೀಶ್ ಮಂದಣ್ಣ, ಜಯಲಕ್ಷ್ಮೀ, ರಮ್ಯ, ಶಾರದ, ಪಂಚಾಯಿತಿ ಕಾರ್ಯದರ್ಶಿ ಕುಶಾಲಪ್ಪ, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.