ಮಡಿಕೇರಿ, ಫೆ. 24 : ಕೊಡಗು ವಿಶೇಷ ಪ್ಯಾಕೇಜ್‍ನಡಿ ಹಾಕತ್ತೂರು ಗ್ರಾಮ ಪಂಚಾಯಿತಿಗೆ ಮಂಜೂರಾದ ರೂ. 44 ಲಕ್ಷದ ಕಾಮಗಾರಿಗಳ ಪೈಕಿ ರೂ. 15 ಲಕ್ಷದ ಕಾಮಗಾರಿಗಳನ್ನು ಯಾವದೇ ಮಾಹಿತಿ ನೀಡದೆ ಇಂಜಿನಿಯರ್‍ಗಳು ಕೈಬಿಟ್ಟಿರುವದಾಗಿ ಆರೋಪಿಸಿರುವ ಪಂಚಾಯಿತಿ ಸದಸ್ಯ ಪಿಯೂಸ್ ಫೆರೇರಾ, ಮುಂದಿನ ನಾಲ್ಕು ದಿನಗಳ ಒಳಗಾಗಿ ನ್ಯಾಯ ಒದಗಿಸಿಕೊಡದಿದ್ದಲ್ಲಿ ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹಾಕತ್ತೂರು ಪಂಚಾಯಿತಿ ವ್ಯಾಪ್ತಿಯ ಮೋಟಯ್ಯ ನವರ ಮನೆ ಎದುರಿನ ರಸ್ತೆಗೆ ಮೋರಿ ನಿರ್ಮಾಣ, ಹೂಕಾಡು ಅಂಗನವಾಡಿಯಿಂದ ಪರಿಶಿಷ್ಟ ಪಂಗಡದ ಕಾಲೋನಿ ರಸ್ತೆ, ಮಂದ್ರೀರ ಕುಟುಂಬಸ್ಥರ ರಸ್ತೆ, ಚೂರಿಕಾಡು ಅಲ್ಪಸಂಖ್ಯಾತರ ಕಾಲೋನಿ ರಸ್ತೆ, ತೊಂಭತ್ತುಮನೆ ಕಾಲೋನಿಯಿಂದ ಹಿರಿಯ ಪ್ರಾಥಮಿಕ ಶಾಲೆಗೆ ತೆರಳುವ ರಸ್ತೆ, ಹುಲಿತಾಳ ರಸ್ತೆ ಅಭಿವೃದ್ಧಿ, ಕಗ್ಗೋಡ್ಲು ಕೋಲೆಯಂಡ ಕುಟುಂಬಸ್ಥರ ರಸ್ತೆ, ಕುಂಜಿಲನ ಕುಟುಂಬಸ್ಥರ ರಸ್ತೆ, ಹಾಕತ್ತೂರು ಈಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ರೂ. 44 ಲಕ್ಷಗಳನ್ನು ಮಂಜೂರು ಮಾಡಲಾಗಿತ್ತು. ಈ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಭೂಮಿಪೂಜೆ ನೆರವೇರಿಸಿದ್ದರು ಎಂದು ಪಿಯೂಸ್ ಫೆರೇರಾ ತಿಳಿಸಿದರು.

ಆದರೆ ಇದೀಗ ಇತರ ಕಾಮಗಾರಿಗಳನ್ನು ನಿರ್ವಹಿಸಲಾಗಿದ್ದರೂ, ಇತರ ಕಾಮಗಾರಿ ಕೈಬಿಟ್ಟಿದ್ದಾರೆ. ಈ ಕುರಿತು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಭು ಅವರುಗಳಿಗೆ ದೂರು ನೀಡಲಾಗಿದೆ. ಈ ಕಾಮಗಾರಿಗಳನ್ನು ತಕ್ಷಣ ಆರಂಭಿಸುವಂತೆ ಆದೇಶಿಸಿದ್ದರೂ, ಇದೀಗ ಇಂಜಿನಿಯರ್ ಒಬ್ಬರು ಈ ಕಾಮಗಾರಿ ನಿರ್ವಹಿಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಮುಂದಿನ ನಾಲ್ಕು ದಿನಗಳ ಒಳಗಾಗಿ ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಿಸಿದ ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಬೂತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಂದ್ರೀರ ತನೋಜ್ ಬೋಪಣ್ಣ, ಕಾರ್ಯದರ್ಶಿ ಎಂ.ಡಿ. ಸತೀಶ್ ಹಾಜರಿದ್ದರು.