ವೀರಾಜಪೇಟೆ, ಫೆ. 24: ಕೇರಳದ ಹುಲಿಕಲ್‍ನ ಆದಿ ಬೈತೂರು ದೇವಾಲಯದಲ್ಲಿ ತಾ. 28 ರಂದು ನಾಗಪೂಜಾ ಉತ್ಸವವನ್ನು ಆಚರಿಸಲಾಗುವದು ಎಂದು ದೇವಾಲಯದ ವ್ಯವಸ್ಥಾಪಕ ಜಯನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ವರ್ಷದಂತೆ ಫೆಬ್ರವರಿ ತಿಂಗಳ ಕುಂಭ ಮಾಸದಲ್ಲಿ ನಾಗಪೂಜಾ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಪೂರ್ವಾಹ್ನ 11 ಗಂಟೆಗೆ ನಾಗದೇವರ ಮಹಾಪೂಜಾ ಸೇವೆ ನಡೆಯಲಿದೆ. ಸಂಜೆ ಸಾಂಪ್ರದಾಯಿಕ ಸರ್ಪಬಲಿ, ಆಶ್ಲೇಷಬಲಿ ಪೂಜೆ ನಡೆಯಲಿದೆ. ಮಾಹಿತಿಗಾಗಿ ಮೊ. 9947182071 ನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಬೈತೂರು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಪುಗ್ಗೇರ ಪೊನ್ನಪ್ಪ ಮಾತನಾಡಿ, ವರ್ಷಕ್ಕೊಮ್ಮೆ ನಡೆಯುವ ನಾಗಾಪೂಜಾ ಉತ್ಸವದಲ್ಲಿ ಆದಿ ಬೈತೂರಪ್ಪ ದೇವಾಲಯ ಕೊಡಗಿನ ಭಕ್ತಾದಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವದರಿಂದ ಹರಕೆ ಹಾಗೂ ಮಹಾಪೂಜಾ ಸೇವೆಯಲ್ಲಿ ಭಾಗಿಯಾಗುವ ಕೊಡಗಿನವರು ಹೆಚ್ಚಿನ ಮಾಹಿತಿಗಾಗಿ ಮೊ. 9663977304ನ್ನು ಸಂಪರ್ಕಿಸಬಹುದು ಎಂದರು.
ಆದಿ ಬೈತೂರು ದೇವಾಲಯದ ಬಳಿಯಲ್ಲಿ ಭಕ್ತಾದಿಗಳಿಗೆ ತಂಗಲು ಹೊಸದಾಗಿ ಅತಿಥಿ ಗೃಹದ ಸೌಲಭ್ಯ ಒದಗಿಸಿರುವದನ್ನು ಬಿಲ್ಡಿಂಗ್ ಫಂಡ್‍ನ ಪುಗ್ಗೇರ ರಂಜಿ ದೇವಯ್ಯ ತಿಳಿಸಿದರು.
ಗೋಷ್ಠಿಯಲ್ಲಿ ದೇವಾಲಯದ ಟ್ರಸ್ಟಿ ವೇಣುಗೋಪಾಲ್, ಪುಗ್ಗೇರ ನಂದಾ, ಶಿವಕುಮಾರ್ ಉಪಸ್ಥಿತರಿದ್ದರು.