ಮಡಿಕೇರಿ, ಫೆ. 14: ಕಳೆದ ವರ್ಷ ಮೇ 11ರಂದು ಮಂಗಳೂರಿನ ಯೆಯ್ಯಾಡಿಯ ಆ್ಯಕ್ಸಿಸ್ ಬ್ಯಾಂಕ್ ಶಾಖೆಯಿಂದ ಬೆಂಗಳೂರಿನ ಕೋರಮಂಗಲ ಶಾಖೆಗೆ ಎ.ಟಿ.ಎಂ. ವಾಹನದಲ್ಲಿ ಕೊಂಡೊಯ್ಯಲಾಗುತ್ತಿದ್ದ ರೂ. 7.50 ಕೋಟಿ ಹಣವನ್ನು ದೋಚಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೂವರು ಪ್ರಮುಖ ಆರೋಪಿಗಳ ಪೈಕಿ, ಒಬ್ಬಾತ ಸಾವನ್ನಪ್ಪಿರುವ ಪ್ರಸಂಗ ನಡೆದಿದೆ. ಈ ಸಂಬಂಧ ತನಿಖೆ ನಡೆಸಿ ಪೂರ್ಣ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಸೋಮವಾರಪೇಟೆ ಠಾಣಾ ಪೊಲೀಸರಿಗೆ ಸೂಚಿಸಿದ್ದಾರೆ. ಅಲ್ಲದೆ, ನಗದು ದೋಚಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಅಪರಾಧ ಪತ್ತೆದಳ ಪೊಲೀಸರಿಗೂ ವಿಷಯ ಮುಟ್ಟಿಸಿದ್ದಾರೆ.
ಕಳೆದ ವರ್ಷ ಮೇ 11ರಂದು ಮಂಗಳೂರಿನಿಂದ ಬೆಂಗಳೂರಿಗೆ ಆ್ಯಕ್ಸಿಸ್ ಬ್ಯಾಂಕ್ ಹಣವನ್ನು ಯೆಯ್ಯಾಡಿಯ ಎಸ್.ಐ.ಎಸ್. ಪ್ರೊಸೆಗುರ್ ಹೋಲ್ಡಿಂಗ್ ಕಂಪನಿ ಮುಖಾಂತರ ಸಂಬಂಧಿಸಿದ ವಾಹನದಲ್ಲಿ ಸಾಗಿಸುವಾಗ, ನಗದು ದೋಚಿದ್ದ ಕೃತ್ಯದಲ್ಲಿ ಕಳೆದ ಒಂಭತ್ತು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಮೂವರಲ್ಲಿ ಓರ್ವನಾಗಿದ್ದ ಟಿ.ಪಿ. ಬಸಪ್ಪ ಅಲಿಯಾಸ್ ಗುಲಾಬಿ (52) ಇದೀಗ ನಿಗೂಢ ರೀತಿ ಸಾವನ್ನಪ್ಪಿದ್ದು, ಹಲವು ಸಂಶಯಗಳಿಗೆ ಕಾರಣವಾಗಿದೆ.
ಒಂಭತ್ತು ತಿಂಗಳ ಹಿಂದೆ ದುಷ್ಕøತ್ಯದ ಬಳಿಕ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದ ತಂಬುಗುತ್ತಿಯಲ್ಲಿ ಕೋಟ್ಯಂತರ ರೂಪಾಯಿ ಹಣದೊಂದಿಗೆ ಕೆಲವರು ಪೊಲೀಸ್ ಕಾರ್ಯಾಚರಣೆ ವೇಳೆ ಕಳೆದ ವರ್ಷ ಮೇ 16ರಂದು ಸಿಕ್ಕಿ ಬಿದ್ದಿದ್ದರು.
ಆ ಬಳಿಕ ಅದೇ ಕುಂಬಾರಗಡಿಗೆ ಗ್ರಾಮದ ತಂಬುಗುತ್ತಿರ ಅಯ್ಯಪ್ಪ ಎಂಬವರ ಪುತ್ರರಾದ ಪೂವಯ್ಯ, ಭೀಮಯ್ಯ ಮತ್ತು ದಿ. ಪೊನ್ನಪ್ಪ ಎಂಬವರ ಮಗ ಟಿ.ಪಿ. ಬಸಪ್ಪ ಇದುವರೆಗೂ ಅಲ್ಲಿನ ಕಾಡಿನಲ್ಲಿ ಅವಿತಿರುವ ಶಂಕೆಯೊಂದಿಗೆ ನಾಪತ್ತೆಯಾಗಿದ್ದರು. ಈ ದಿಸೆಯಲ್ಲಿ ಮೇಲಿಂದ ಮೇಲೆ ಮಂಗಳೂರು ಪೊಲೀಸರು, ಕೊಡಗು ಪೊಲೀಸರ ಸಹಕಾರದಿಂದ ಜಂಟಿ ಕಾರ್ಯಾಚರಣೆ ನಡೆಸುತ್ತಲೇ ಇದ್ದರೂ ಆರೋಪಿಗಳು ಸೆರೆಯಾಗಿರಲಿಲ್ಲ.
ಈ ನಡುವೆ ತಾ. 12ರಂದು ರಾತ್ರಿ ವೇಳೆಯಲ್ಲಿ ಆರೋಪಿ ಟಿ.ಪಿ. ಬಸಪ್ಪ ಕುಂಬಾರಗಡಿಗೆ ಗ್ರಾಮದ ತಂಬುಗುತ್ತಿರ ದಿವಂಗತ ಸುಬ್ಬಯ್ಯ (ಅಣ್ಣಯ್ಯ) ಎಂಬವರ ಮನೆಗೆ ಆಗಮಿಸಿ ಕತ್ತಲೆಯ ನಡುವೆ ಹಿಂಬಾಗಿಲನ್ನು ಬಡಿದಿದ್ದಾಗಿ ಅಲ್ಲಿನ ಒಂಟಿ ಮಹಿಳೆ ಪೊನ್ನವ್ವ ಬಹಿರಂಗಗೊಳಿಸಿದ್ದಾರೆ. ಯಾರು ಬಾಗಿಲು ಬಡಿಯುವದೆಂದು ಬಾಗಿಲು ತೆರೆದು ನೋಡಲಾಗಿ, ಆರೋಪಿ ಬಸಪ್ಪ ತೀರಾ ಬಳಲುವದರೊಂದಿಗೆ ಮನೆಯೊಳಗೆ ಪ್ರವೇಶಿಸಿದ್ದಾನೆ.
ಅಲ್ಲದೆ ತನಗೆ ತುಂಬಾ ಸುಸ್ತಾ ಗುತ್ತಿರುವದಾಗಿ ಹೇಳಿ ಕೋಣೆಯ ಸೋಫಾದಲ್ಲಿ ಮಲಗಿಕೊಂಡಿದ್ದು, ಒಂಟಿ ಮಹಿಳೆ
(ಮೊದಲ ಪುಟದಿಂದ) ಪೊನ್ನವ್ವ ತಮ್ಮ ಪಾಡಿಗೆ ತಾವು ಕೂಡ ಕೊಠಡಿಯೊಳಗೆ ಮಲಗಿಕೊಂಡಿದ್ದಾರೆ. ಮಧ್ಯರಾತ್ರಿ ಬಳಿಕ ಮೂರು ಗಂಟೆ ಸುಮಾರಿಗೆ ಆಕೆ ಸಂಶಯದಿಂದ ಎದ್ದು ನೋಡಿದಾಗ ಬಸಪ್ಪ ಜೀವಂತ ಇರುವ ಬಗ್ಗೆ ಸಂಶಯಗೊಂಡಿದ್ದಾರೆ.
ಒಂಟಿ ವಾಸವಿದ್ದ ವೃದ್ಧೆ ಮಹಿಳೆ ಪೊನ್ನವ್ವ ಗಾಬರಿಯಿಂದ ಕೂಗಳತೆ ದೂರದ ನೆರೆಮನೆಯ ನಿವಾಸಿ ಹಾಗೂ ಮೃತ ಬಸಪ್ಪನ ಅಣ್ಣ ಮುದ್ದಯ್ಯ ಎಂಬವರಿಗೆ ಈ ವಿಷಯ ತಿಳಿಸಿದ್ದಾರೆ. ಅವರು ತಕ್ಷಣ ಧಾವಿಸಿ ನೋಡಲಾಗಿ ಬಸಪ್ಪ ಸತ್ತಿರುವದು ಖಾತರಿಯಾಗಿದೆ. ಆ ಕೂಡಲೇ ಮುದ್ದಯ್ಯ ತನ್ನ ಮತ್ತೋರ್ವ ಸೋದರ ಟಿ.ಪಿ. ಸುಬ್ಬಯ್ಯ ಎಂಬವರಿಗೆ ದುರ್ಘಟನೆಯನ್ನು ತಿಳಿಸಿದ್ದಾರೆ.
ಹೀಗೆ ರೂ. 7.50 ಕೋಟಿ ದರೋಡೆ ಪ್ರಕರಣದ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಬಸಪ್ಪನ ಸಾವಿನ ಬಗ್ಗೆ ಆತನ ಕುಟುಂಬಸ್ಥರು ಸೋಮವಾರಪೇಟೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಆ ಕೂಡಲೇ ಪೊಲೀಸರು ಕುಂಬಾರಗಡಿಗೆ ಗ್ರಾಮದ ತಂಬುಗುತ್ತಿಗೆ ಧಾವಿಸಿದ್ದಾರೆ.
ಆ ಮುಖಾಂತರ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವದರೊಂದಿಗೆ, ನಿಗೂಢ ಸಾವಿಗೀಡಾಗಿರುವ ಬಸಪ್ಪನ ಹೆಣವನ್ನು ಮಡಿಕೇರಿಯಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆ ವೈದ್ಯರಿಂದ ಶವದ ಮರಣೋತ್ತರ ಪರೀಕ್ಷೆ ಬಳಿಕ ಪಂಚನಾಮೆಯೊಂದಿಗೆ ಮೃತ ಶರೀರವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ಆ ವೇಳೆಗೆ ಬೆಂಗಳೂರಿನಲ್ಲಿದ್ದ ಮೃತ ಬಸಪ್ಪನ ಪತ್ನಿ ಕಾಳಮ್ಮ ಹಾಗೂ ಮಕ್ಕಳು ಕೂಡ ಗ್ರಾಮಕ್ಕೆ ಧಾವಿಸುವದರೊಂದಿಗೆ, ಬಸಪ್ಪ ನಿಗೂಢ ರೀತಿ ಸಾವಿಗೀಡಾಗಿರುವ ಬಗ್ಗೆ ಕಂಗಾಲಾಗಿದ್ದಾರೆ. ಕಳೆದ ಒಂಭತ್ತು ತಿಂಗಳಿನಿಂದ ಮೊನ್ನೆಯ ತನಕವೂ ರೂ.7.50 ಕೋಟಿ ದರೋಡೆ ಪ್ರಕರಣದ ಪ್ರಮುಖ ಆರೋಪಿ ಸಹೋದರರಾದ ಟಿ.ಎ. ಭೀಮಯ್ಯ ಹಾಗೂ ಟಿ.ಎ. ಪೂವಯ್ಯ ಎಂಬವರೊಂದಿಗೆ ಟಿ.ಪಿ. ಬಸಪ್ಪನೂ ಒಟ್ಟಿಗೆ ತಲೆಮರೆಸಿಕೊಂಡಿರುವದಾಗಿ ನಂಬಲಾಗಿತ್ತು.
ಆದರೀಗ ಬಸಪ್ಪ ಏಕಾಂತವಾಗಿ ಕಾಣಿಸಿಕೊಂಡು ಆ ಬಳಿಕ ಕೆಲವೇ ಗಂಟೆಗಳಲ್ಲಿ ಏನೊಂದೂ ಸುಳಿವು ನೀಡದೆ ಸಾವನ್ನಪ್ಪಿರುವದು ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ಸಾವನ್ನಪ್ಪಿರುವ ಬಸಪ್ಪನ ಬಾಯಿಯಿಂದ ಜೊಲ್ಲುಮಿಶ್ರಿತ ಹಸಿರು ಬಣ್ಣದ ನೊರೆ ಬರುತ್ತಿದ್ದುದಾಗಿ ಕುಟುಂಬಸ್ಥರು ಸುಳಿವು ನೀಡಿದ್ದಾರೆ.
ಶವದ ಮರಣೋತ್ತರ ಪರೀಕ್ಷೆಯಲ್ಲಿ ಬಸಪ್ಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವದು ಗೋಚರಿಸಿದ್ದು, ಮೃತ ದೇಹದ ಕೆಲ ಭಾಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕುಂಬಾರಗಡಿಗೆ ಗ್ರಾಮದಲ್ಲಿ ಮೃತನ ಅಂತ್ಯಕ್ರಿಯೆ ನಡೆಯಿತು. ಒಟ್ಟಿನಲ್ಲಿ ಕಳೆದ ಒಂಭತ್ತು ತಿಂಗಳಿನಿಂದ ಅವಿತುಕೊಂಡಿದ್ದ ಬಸಪ್ಪ ಇದುವರೆಗೆ ಯಾರ ಆಸರೆಯಲ್ಲಿದ್ದ ಹಾಗೂ ಇನ್ನಿಬ್ಬರು ಪ್ರಮುಖ ಆರೋಪಿಗಳು ಎಲ್ಲಿದ್ದಾರೆ ಎಂಬ ಹೊಸ ಅನುಮಾನಗಳು ಹುಟ್ಟಿಕೊಂಡಿದ್ದು, ಪೊಲೀಸರ ತನಿಖೆಯಿಂದಷ್ಟೇ ಎಲ್ಲವೂ ಬಹಿರಂಗಗೊಳ್ಳಬೇಕಿದೆ.