ಪೊನ್ನಂಪೇಟೆ, ಫೆ. 14: ಮುಂಬರುವ ಬೇಸಿಗೆ ಅವಧಿಯಲ್ಲಿ ತಾಲೂಕಿನ ಜನತೆ ಕುಡಿಯುವ ನೀರಿಗಾಗಿ ತೊಂದರೆ ಪಡಬಾರದು. ಈ ಬಗ್ಗೆ ತೀವ್ರ ನಿಗಾ ವಹಿಸಲು ವೀರಾಜಪೇಟೆ ತಾಲೂಕು ಪಂಚಾಯಿತಿ ವತಿಯಿಂದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕುಡಿಯುವ ನೀರಿಗೆ ಆದ್ಯತೆ ನೀಡುವಂತೆ ನಿರ್ಣಯ ಅಂಗೀಕರಿಸಲಾಯಿತು.ಪೊನ್ನಂಪೇಟೆಯ ‘ಸಾಮಥ್ರ್ಯ ಸೌಧ’ದ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕುಡಿಯುವ ನೀರಿಗಾಗಿ ಅಗತ್ಯವಿರುವೆಡೆ ಕೊಳವೆ ಬಾವಿಗಳನ್ನು ಕೊರೆಸಬೇಕು. ಈ ವೇಳೆ ಪಿ.ವಿ.ಸಿ. ಪೈಪ್‍ಗಳನ್ನೆ ಹಾಕಬೇಕು. ಈ ಕುರಿತು ಯಾವದೇ ಒತ್ತಡಕ್ಕೆ ಅಧಿಕಾರಿಗಳು ಮಣಿಯಬಾರದು. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಈಗಿನಿಂದಲೇ ಅಗತ್ಯ ಪೂರ್ವಾ ತಯಾರಿಗಳನ್ನು ಮಾಡಿಕೊಳ್ಳುವಂತೆ ಸಭೆಯಲ್ಲಿದ್ದ ಅಧಿಕಾರಿಗೆ ಸದಸ್ಯರು ಸೂಚಿಸಿದರು. ಸದಸ್ಯೆ ಆಲತಂಡ ಸೀತಮ್ಮ ಪ್ರಕಾಶ್ ಅವರು ಮಾತನಾಡಿ, ಮಧ್ಯರಾತ್ರಿಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಅವಕಾಶ ನೀಡಬಾರದು ಎಂದಾಗ ಸದಸ್ಯರು ಇದಕ್ಕೆ ದನಿಗೂಡಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ವಿಷಯ ಪ್ರಸ್ತಾಪಿಸಿ ಮಾತನಾಡಿದ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಶೀಘ್ರದಲ್ಲೆ ಚುನಾವಣೆಯ ಅಧಿಸೂಚನೆ ಹೊರಬೀಳುವ ಸಾಧ್ಯತೆಗಳಿದೆ. ಅದಕ್ಕೂ ಮುನ್ನಾ ಮುಂದಿನ ಮುಂಗಾರು ಸಮಯದಲ್ಲಿ ಕೃಷಿ ಚಟುವಟಿಕೆ ನಡೆಸಲು ಇಲ್ಲಿಗೆ ಹೊಂದುವ ನೂತನ ಭತ್ತದ ತಳಿಯನ್ನು ತರಿಸಿ ರೈತರಿಗೆ ನೀಡುವಂತಾಗಬೇಕು. ಸಾಧ್ಯವಾದರೆ ಅಧಿಕ ಇಳುವರಿ ನೀಡುವ ‘ಬರ್ಮಾರೈಸ್’ ತಳಿಯನ್ನು ಸ್ಥಳಿಯವಾಗಿ
(ಮೊದಲ ಪುಟದಿಂದ) ಪರಿಚಯಿಸಲು ಇಲಾಖೆ ಮುಂದಾಗಬೇಕು ಎಂದರು.
ತಾ.ಪಂ. ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದ ತಾಲೂಕು ತಹಶೀಲ್ದಾರ್ ಅವರ ವಿರುದ್ಧ ಸಭೆಯಲ್ಲಿ ತೀವ್ರ ಆಕ್ರೋಶ ಕೇಳಿಬಂತು. ಕಂದಾಯ ಇಲಾಖೆ ಸಂಪೂರ್ಣ ಲಂಚಮಯವಾಗಿದೆ. ಮತದಾರರ ಗುರುತಿನ ಚೀಟಿ ಸರಿಯಾಗಿ ದೊರೆಯುತ್ತಿಲ್ಲ. ಈ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಬೇಕಾಗಿತ್ತು. ಆದರೆ ತಹಶೀಲ್ದಾರ್ ಅವರು ಗೈರು ಹಾಜರಾಗಿದ್ದು ತೀವ್ರ ನಿರಾಸೆಯಾಗಿದೆ ಎಂದು ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ತಹಶೀಲ್ದಾರ್ ಅವರಿಗೆ ಕಾರ್ಯನಿಮಿತ್ತ ಕರೆ ಮಾಡಿದರೆ ಕರೆ ಸ್ವೀಕರಿಸುವದಿಲ್ಲ. ತಾ.ಪಂ. ಸಭೆಗಳಿಗೆ ಹಾಜರಾಗುವಂತೆ ಪತ್ರ ಕಳಿಸಿದರೂ ಅವರು ಸ್ಪಂದಿಸುತ್ತಿಲ್ಲ. ಆದ್ದರಿಂದ ಈ ಕುರಿತು ತಾ.ಪಂ. ವತಿಯಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ನಿರ್ಣಯ ಕೈಗೊಳ್ಳಲು ಸೂಚಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯೆ ಹೆಚ್.ಕೆ. ಚೆನ್ನಮ್ಮ ಅವರು, ‘ತಾ.ಪಂ. ಸದಸ್ಯರಾದ ನಾವೇ ತಾಲೂಕು ಕಚೇರಿಗೆ ತೆರಳಿದರೂ ಮತದಾರರ ಗುರುತಿನ ಚೀಟಿ ಪಡೆಯಲು ಸಾಧ್ಯವಿಲ್ಲ. ಆದರೆ ಕೆಲ ಬ್ರೋಕರ್‍ಗಳಿಗೆ ರೂ. 1000 ನೀಡಿದರೆ ಒಂದೇ ದಿನದಲ್ಲಿ ಮತದಾರರ ಗುರುತಿನ ಚೀಟಿ ದೊರೆಯುತ್ತದೆ. ಇದರ ರಹಸ್ಯ ಏನು’ ಎಂದು ಸಭೆಯಲ್ಲಿ ಪ್ರಶ್ನಿಸಿದರು. ನಂತರ ಈ ಕುರಿತು ಬಿಸಿ ಚರ್ಚೆಯಾದಾಗ ಇದರ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ತರಲಾಗುವದು ಎಂದು ಸಭೆಯಲ್ಲಿದ್ದ ಪೊನ್ನಂಪೇಟೆ ಕಂದಾಯ ನಿರೀಕ್ಷಕ ರಾಧಕೃಷ್ಣ ಹೇಳಿದ ನಂತರ ಚರ್ಚೆಗೆ ತೆರೆಬಿತ್ತು.
ಪೊನ್ನಂಪೇಟೆಯ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿಹೋಗಿದೆ. ಅಲ್ಲಿ ಕಚೇರಿ ಸಮಯದಲ್ಲಿ ಜನಸಾಮಾನ್ಯರ ಯಾವದೇ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಆದರೆ ಸಂಜೆ ಐದು ಗಂಟೆ ನಂತರ ರಾತ್ರಿ ಒಂಭತ್ತರವರೆಗೂ ಎಲ್ಲಾ ಕೆಲಸಗಳು ನಡೆಯುತ್ತವೆ. ಕೆಲ ಇಲಾಖೆಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಜನರನ್ನು ‘ಹಗಲು ದರೋಡೆ’ ನಡೆಸುತ್ತಿದ್ದರೆ, ಪೊನ್ನಂಪೇಟೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ‘ರಾತ್ರಿ ದರೋಡೆ’ ನಡೆಸಲಾಗುತ್ತಿದೆ ಎಂದು ವಿಷಯ ಪ್ರಸ್ತಾಪಿಸಿ ಮಾತನಾಡಿದ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಈ ದಂಧೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಹುದಿಕೇರಿ ಸಮೀಪದ ಬೆಳ್ಳೂರಿನಲ್ಲಿ ಕಳೆದ ಮೂರು ವರ್ಷದ ಹಿಂದೆ ನಡೆದ ಕಾಮಗಾರಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿದ್ದ ಜಿ.ಪಂ ಎಂಜಿನಿಯರಿಂಗ್ ವಿಭಾಗದ ಎಇಇ ಟಿ.ಬಿ.ಪೂಣಚ್ಚ ಅವರನ್ನು ನೆಲ್ಲೀರ ಚಲನ್ ಕುಮಾರ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪೂಣಚ್ಚ ಅವರು, ಈಗಾಗಲೇ ಅಂದಿನ ವಿಭಾಗೀಯ ಇಂಜಿನಿಯರ್ ಅವರಿಗೆ ನೋಟೀಸ್ ನೀಡಲಾಗಿದೆ. ಇದುವರೆಗೂ ಯಾವದೇ ಉತ್ತರ ಬಂದಿಲ್ಲ ಎಂದು ಹೇಳಿದರು.
ಅವರ ವಿರುದ್ಧ ಕ್ರಮಕ್ಕೆ ಮುಂದಾಗಿ ಎಂದು ಪೂಣಚ್ಚ ಸೂಚಿಸಿದರಲ್ಲದೆ, ಮಾರ್ಚ್ 15ರ ಒಳಗಾಗಿ ಅನುಮೋದಿತ ಎಲ್ಲಾ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ಚೆಸ್ಕಾಂ ಸಮಸ್ಯೆ ಬಗ್ಗೆ ಸದಸ್ಯ ಅಜಿತ್ ಕರುಂಬಯ್ಯ, ಅಧಿಕಾರಿ ಅಂಕಯ್ಯ ಅವರ ಗಮನಕ್ಕೆ ತಂದರು. ಸರ್ವೆ ಇಲಾಖೆಯಲ್ಲಿ ಯಾವ ಕೆಲಸವೂ ಆಗುತ್ತಿಲ್ಲ ಎಂದರು. ಅತೃಪ್ತಿ ವ್ಯಕ್ತಪಡಿಸಿದ ಸದಸ್ಯ ಮಾಳೇಟಿರ ಪ್ರಶಾಂತ್ ಕೆದಮುಳ್ಳೂರು ಮತ್ತು ತೋರದ ಸಾರ್ವಜನಿಕ ಸ್ಮಶಾನದ ಕಡತ ಕಳೆದ 9 ತಿಂಗಳಿನಿಂದ ಇಲಾಖೆಯಲ್ಲಿದ್ದರೂ ಇಂದಿಗೂ ಇತ್ಯರ್ಥವಾಗಿಲ್ಲ ಎಂದಾಗ ಈ ಬಗ್ಗೆ ಉತ್ತರಿಸಿದ ಸರ್ವೆ ಇಲಾಖೆ ಅಧಿಕಾರಿ ಕೂಡಲೆ ಪರಿಶೀಲಿಸಿ ಇತ್ಯರ್ಥಪಡಿಸಲಾಗುವದು ಎಂದು ಹೇಳಿದರು.
ಗ್ರಾ.ಪಂ. ಅಧೀನದ ಅಂಗಡಿ ಮಳಿಗೆಗಳನ್ನು ಸರಿಯಾಗಿ ಹರಾಜು ಹಾಕದಿರುವದರ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಜಯ ಪೂವಯ್ಯ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಯ ಅಂಗಡಿ ಮಳಿಗೆಗಳನ್ನು ಬೇನಾಮಿ ಹೆಸರಿನಲ್ಲಿ ನಡೆಸುತ್ತಿದ್ದಾರೆ. ವಿದೇಶದಲ್ಲಿ ನೆಲೆಸಿದವರೂ ಅಲ್ಲಿ ಮಳಿಗೆಗಳನ್ನು ಹೊಂದಿದ್ದಾರೆ. ಪಂಚಾಯಿತಿಗೆ 2ರಿಂದ 3 ಸಾವಿರ ಮಾಸಿಕ ಬಾಡಿಗೆ ಪಾವತಿಸುವ ಬಾಡಿಗೆದಾರರು ಅದೇ ಮಳಿಗೆಯನ್ನು ದಿನ ಒಂದಕ್ಕೆ 1 ಸಾವಿರದಿಂದ 1500 ರವರೆಗೆ ಬಾಡಿಗೆ ಪಡೆಯುತ್ತಿದ್ದಾರೆ. ಇದರಲ್ಲಿ ಕೆಲ ಗ್ರಾ.ಪಂ ಸದಸ್ಯರೂ ಭಾಗಿಯಾಗಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಕಾರ್ಯನಿರ್ವಾಹಣಾಧಿಕಾರಿ ಜಯಣ್ಣ ಈ ಬಗ್ಗೆ ಪರಿಶೀಲಿಸಿ ಪಿಡಿಒಗೆ ನೋಟೀಸ್ ನೀಡಲಾಗುವದು ಎಂದರು.
ಹುದಿಕೇರಿಯ ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕರು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಅನಧಿಕೃತವಾಗಿ ಸಹಾಯಕನೋರ್ವನನ್ನು ನಿಯೋಜಿಸಿ ಗುತ್ತಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಉಪಾಧ್ಯಕ್ಷ ಚಲನ್ ಗಮನಸೆಳೆದಾಗ ಇದಕ್ಕೆ ಸದಸ್ಯ ಅಜಿತ್ ಕರುಂಬಯ್ಯ ದನಿಗೂಡಿಸಿದರು. ಆದ್ದರಿಂದ ಈ ಅವ್ಯವಸ್ಥೆಯನ್ನು ಸರಿಪಡಿಸಲು ಜಿಲ್ಲಾ ಗ್ರಂಥಪಾಲಕರಿಗೆ ಪತ್ರ ಬರೆಯುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್ ಸೇರಿದಂತೆ ವಿವಿಧ ಕ್ಷೇತ್ರದ ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ ವರದಿ: ರಫೀಕ್ ತೂಚಮಕೇರಿ.