ಗೋಣಿಕೊಪ್ಪಲು, ಫೆ. 14: ಇತ್ತೀಚೆಗೆ ಕಾವೇರಿ ಎಜುಕೇಷನ್ ಸೊಸೈಟಿ ಹಾಗೂ ಗೋಣಿಕೊಪ್ಪಲು ಕಾವೇರಿ ಕಾಲೇಜುವಿನ ಸುವರ್ಣ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಕಾವೇರಿ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ “ಎಕೋವಿಸ್ಟಾ- 18 ಅರ್ಥಶಾಸ್ತ್ರ ಹಬ್ಬ”ದ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಮೈಸೂರಿನ ಮಹಾಜನ ಕಾಲೇಜು ಪಡೆದುಕೊಂಡರೆ, ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಮಂಗಳೂರಿನ ಸೆಂಟ್ ಅಲೋಸಿಯಸ್ ಕಾಲೇಜು ಪಡೆದುಕೊಂಡಿತು.
ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷರಾದ ಡಾ. ಎ.ಸಿ. ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಉದ್ಘಾಟಿಸಿದರು. ಅತಿಥಿಗಳಾಗಿ ಗೋಣಿಕೊಪ್ಪಲು ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಸಫಿನ್ಸಾ, ಪ್ರೊ. ಎ.ಎಂ. ಕಮಲಾಕ್ಷಿ ಉಪನ್ಯಾಸಕರಾದ ಬೆನಡಿಕ್ಟ್ ಸಾಲ್ಡಾನ, ಸಿ.ಎಂ. ಕಿರಣ್, ಪವಿತ್ರ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಪ್ರೊ. ಪಟ್ಟಡ ಪೂವಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕರಾದ ಇಟ್ಟೀರ ಕೆ. ಬಿದ್ದಪ್ಪ ವಿಜೇತರಿಗೆ ಬಹುಮಾನ ವಿತರಿಸಿದರು. ರಾಜ್ಯದ 18 ಕಾಲೇಜುಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭ ವಿದ್ಯಾರ್ಥಿಗಳಿಂದ ವಿವಿಧ ಮಾದರಿ ಪ್ರದರ್ಶನ ಹಾಗೂ ಸಾಂಪ್ರದಾಯಿಕ ಕೃಷಿ ಉಪಕರಣಗಳ ಪ್ರದರ್ಶನ ಮಾಡಲಾಗಿತ್ತು.