ಮಡಿಕೇರಿ, ಫೆ. 11: ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕೊಡಗಿನ ಸಮಗ್ರ ಅಭಿವೃದ್ಧಿಗೆ ರೂ. 1850 ಕೋಟಿ ಹಣ ಒದಗಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆಯೊಂದಿಗೆ ಇಲ್ಲಿ ಬಿಜೆಪಿ ಆಡಳಿತವಿರುವ ಕಾರಣ ನಿರ್ಲಕ್ಷ್ಯ ತಳೆದಿದ್ದಾರೆ ಎಂದು ಮಡಿಕೇರಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಭಾವೀ ಅಭ್ಯರ್ಥಿಯೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇತ್ತೀಚೆಗೆ ಪ್ರಕಟಿಸಿರುವ ಬಗ್ಗೆ ‘ಶಕ್ತಿ’ ಸಂದರ್ಶನದಲ್ಲಿ ಅವರು ಮೇಲಿನಂತೆ ಟೀಕಿಸಿದ್ದಾರೆ.ಶಕ್ತಿ’ : ಪ್ರಸಕ್ತ ಅವಧಿಯಲ್ಲಿ ಅಭಿವೃದ್ಧಿ ಬಗ್ಗೆ ಆಸಕ್ತಿ ತೋರಿಲ್ಲವೆಂಬ ಆರೋಪವಿದೆಯಲ್ಲಾ?
ಅಪ್ಪಚ್ಚು ರಂಜನ್ : ಸರಕಾರ ಹಣ ಬಿಡುಗಡೆ ಮಾಡಿದರೆ ಅಲ್ಲವೇ ಅಭಿವೃದ್ಧಿ ಕೆಲಸ ಮಾಡಿಸುವದು, ಕಾಂಗ್ರೆಸ್ ಸರಕಾರ ಹಾಗೂ ಮುಖ್ಯಮಂತ್ರಿ ಕೊಡಗನ್ನು ನಿರ್ಲಕ್ಷಿಸಿದ್ದು, ಯಾವದೇ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ನಮ್ಮ ಸರಕಾರ ಇದ್ದಾಗ ಕೊಡಗಿನ ಸಮಗ್ರ ಅಭಿವೃದ್ಧಿಗಾಗಿ ಯೋಜನೆ ರೂಪಿಸಿದ್ದನ್ನು ಜನತೆ ಕಂಡಿದ್ದಾರೆ. ಹಾಗಾಗಿ ಈಗಲೂ ಅದನ್ನೇ ನಿರೀಕ್ಷಿಸುತ್ತಿದ್ದಾರೆ.
‘ಶಕ್ತಿ’ : ಕೊಡವ - ಗೌಡ ಜನಾಂಗ ನಡುವೆ ಸಂಘರ್ಷ ಹೊಗೆಯಾಡುತ್ತಿದೆ?
ಅಪ್ಪಚ್ಚು : ಬಹಳ ವರ್ಷಗಳ ಹಿಂದೆ ಬಿ.ಬಿ. ಶಿವಪ್ಪ ಅವರು ಚುನಾವಣಾ ಕಣಕ್ಕೆ ಇಳಿದಿದ್ದ ಕಾಲದಿಂದಲೂ ರಾಜಕಾರಣ ನೋಡಿದ್ದು, ಯಾವತ್ತೂ ಕೊಡಗಿನ ಜನ ಜಾತಿ ರಾಜಕಾರಣ ಮಾಡಿಲ್ಲ. ಬಿಜೆಪಿ ಚಿಂತನೆಗಳನ್ನು ಒಪ್ಪಿಕೊಂಡು ಕೆಲಸ ಮಾಡುವವರನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಬಿಜೆಪಿಯೊಳಗೆ ಯಾವದೇ ಗೊಂದಲವಿಲ್ಲ. ಜಾತಿ ರಾಜಕಾರಣಕ್ಕೆ ಜಿಲ್ಲೆಯಲ್ಲಿ ಯಾರೂ ಮಣೆ ಹಾಕುವದಿಲ್ಲ. ಅನೇಕ ಚುನಾವಣೆಗಳಲ್ಲಿ ಇದು ಖಾತರಿಯಾಗಿದೆ.
‘ಶಕ್ತಿ’ : ನಿಮಗೆ ಟಿಕೆಟ್ ಖಾತರಿಯೇ? ಯಡಿಯೂರಪ್ಪ ಹೇಳಿದ್ದಾರಲ್ಲ?
ಅಪ್ಪಚ್ಚು : ಬಿಜೆಪಿಯ ಆಂತರಿಕ ವಿಷಯ ಮಾತನಾಡುವದಿಲ್ಲ, ಆ ಬಗ್ಗೆ ವರಿಷ್ಠರೇ ನಿಧರ್üರಿಸಲಿದ್ದಾರೆ.
‘ಶಕ್ತಿ’ : ಮುಂಬರಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಸ್ಪರ್ಧಿಗಳ್ಯಾರು?
ಅಪ್ಪಚ್ಚು : ಜಿಲ್ಲೆಯಲ್ಲಿ ಬಿಜೆಪಿಯ ಶಕ್ತಿ ಬಲಿಷ್ಠವಾಗಿದೆ, ಸ್ಪರ್ಧೆ ಕೂಡ ಕಾಂಗ್ರೆಸ್ ನಡುವೆ ಏರ್ಪಡಲಿದೆ. ಜನತಾದಳ ಆಟಕ್ಕಿದ್ದು, ಅವರೊಳಗೆ ಸಾಕಷ್ಟು ಗೊಂದಲಗಳಿರುವದು ತಿಳಿದ ವಿಚಾರ, ಚುನಾವಣೆ ಸಮೀಪಿಸಿದಾಗ ಸ್ಪಷ್ಟ ಚಿತ್ರಣ ಮೂಡಲಿದೆ. ಈಗಾಗಲೇ ಅನೇಕರು ನಮ್ಮ ಪಕ್ಷ ಸೇರಿದ್ದಾಗಿದೆ.
‘ಶಕ್ತಿ’ : ಮಡಿಕೇರಿ ನಗರಸಭೆಯೊಳಗೆ