ಮಡಿಕೇರಿ, ಫೆ. 12: ಕೊಡಗಿನಲ್ಲಿ ಹಲವಾರು ಸಮಸ್ಯೆಗಳಿವೆ. ಆಡಳಿತ ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ಆಗಬೇಕಾದ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಕಚೇರಿಗಳಿಗೆ ಅಲೆದು ಜನತೆ ಪರದಾಡುವ ಸ್ಥಿತಿ ಬಹುತೇಕ ಕಡೆ ಇದೆ. ವಿವಿಧ ಇಲಾಖೆಗಳಲ್ಲಿ ಜನರಿಗೆ ಸೂಕ್ತ ಸ್ಪಂದನ ಸಿಗುತ್ತಿಲ್ಲ. ಸಿಗಬೇಕಾದ ಸೌಲಭ್ಯಗಳು ದೊರಕುತ್ತಿಲ್ಲ. ಇವುಗಳೆಲ್ಲದರ ಬಗ್ಗೆ ಕೂಲಂಕುಷ ಪರಿಶೀಲಿಸಿ ಪರಿಹಾರೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ನಡೆಸುವ ಸಭೆಗೆ ಜಿಲ್ಲಾಮಟ್ಟದ ಕೆಲ ಪ್ರಮುಖ ಅಧಿಕಾರಿಗಳೇ ಬರುವದಿಲ್ಲ.

ಹೌದು.., ಕೊಡಗು-ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಏರ್ಪಾಡಾಗಿತ್ತು.

ಮಧ್ಯಾಹ್ನ 2.30 ಗಂಟೆಗೆ ಏರ್ಪಾಡಾಗಿದ್ದ ಸಭೆ ಸಂಸದರು ತಡವಾಗಿ ಬಂದ ಕಾರಣ 3.30 ಗಂಟೆಗೆ ಆರಂಭವಾಯಿತು. ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದ ಕಾರಣ ಸಭೆಗೆ ಬರಲು ತಡವಾಯಿತು ಕ್ಷ್ಷಮೆ ಇರಲಿ ಎಂದು ಹೇಳಿ ಸಂಸದರು ಸಭೆ ಆರಂಭಿಸಿದರು. ಸಭೆಯ ಆರಂಭದಲ್ಲಿ ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಸಭೆಯಲ್ಲಿ ಇಲ್ಲದಿದ್ದುದನ್ನು ಕಂಡ ಸಂಸದರು ಈ ಬಗ್ಗೆ ಜಿಲ್ಲಾಧಿಕಾರಿ ಯವರ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಪ್ರಾಣಿ-ಮಾನವ ಸಂಘರ್ಷ ಮಿತಿ ಮೀರುತ್ತಿದೆ. ಜನತೆ ಕಾಡಾನೆ, ಹುಲಿ ಹಾವಳಿಯಿಂದ ಪರದಾಡುತ್ತಿದ್ದಾರೆ. ಹೀಗಿದ್ದಾಗ್ಯೂ ಅರಣ್ಯ ಅಧಿಕಾರಿಗಳು ಸಂಸದರ ಸಭೆಗೆ ಗೈರು ಹಾಜರಾಗಿದ್ದರು.

ಇನ್ನು ಸೆಸ್ಕಾಂನ ಕಾರ್ಯಪಾಲಕ ಅಭಿಯಂತರರು ಕೂಡ ಸಭೆಗೆ ಗೈರಾಗಿದ್ದರು. ಅಭಿಯಂತರರ ಪರವಾಗಿ ಸಭೆಗೆ ಬಂದಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಮರ್ಪಕ ಮಾಹಿತಿ ಹೊಂದಿಲ್ಲದ ಕಾರಣ ಒಂದು ಹಂತದಲ್ಲಿ ತಡವರಿಸಿ ದರು. ಸಮಾಜ ಕಲ್ಯಾಣಾಧಿಕಾರಿಗಳು ವಸತಿ ರಹಿತರಿಗೆ ವಸತಿ ನಿರ್ಮಾಣ ಸಂಬಂಧ ಸೂಕ್ತ ಮಾಹಿತಿ ನೀಡದ ಕಾರಣ ಸಂಸದರು ಅಸಮಾಧಾನ ಗೊಂಡರು.

ಏತಕ್ಕಾಗಿ ಸಭೆ?

ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲ್ಪಟ್ಟರೆ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಅದು ಸಂಸದರ ಸ್ಥಾನಕ್ಕೆ ನೀಡುವ ಗೌರವ. ಆದರೆ ಪ್ರತಿ ಬಾರಿ ಸಂಸದರು ಸಭೆ ನಡೆಸಿದಾಗಲೂ ಕೆಲ ಅಧಿಕಾರಿಗಳ ಗೈರು ಕಂಡು ಬರುತ್ತದೆ. ಗೈರಾದ ಅಧಿಕಾರಿಗೆ ನೋಟೀಸ್ ನೀಡಿ ಎಂಬ ಸೂಚನೆ ಮರುಕಳಿಸುತ್ತಿರುತ್ತದೆ. ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗುತ್ತದೆ. ಬಹುತೇಕ ನಿರ್ಧಾರಗಳು ಅರ್ಧಂಬರ್ಧ ಅನುಷ್ಠಾನಗೊಳ್ಳುತ್ತದೆ. ಅನುಷ್ಠಾನಗೊಳ್ಳದ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳಿಂದ ಕಾನೂನು ಕಟ್ಟಳೆಗಳ ನೆಪ ಕೇಳಿಬರುತ್ತದೆ.

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಎಂದರೆ ಕೊಡಗಿನ ಅಭಿವೃದ್ಧಿ ಪರಿಶೀಲನೆಗಾಗಿ ಇರುವ ಸಭೆ ಎಂಬದನ್ನೆ ಅಧಿಕಾರಿಗಳು ಮರೆತಂತಿದೆ. ಮೂರು ತಿಂಗಳಿಗೊಮ್ಮೆ ಸಭೆ ನಡೆಸುವ ಸಂಸದರಿಗೆ ಜಿಲ್ಲೆಯ ಅಧಿಕಾರಿಗಳ ಮೇಲೆ ಹಿಡಿತವಿಲ್ಲ ವೇನೋ ಎಂಬ ಅನುಮಾನ ಕಾಡುತ್ತದೆ.

ಸಂಸದರು ಎಂದರೆ ಕೊಡಗಿಗೆ ‘ಸುಪ್ರೀಂ’ ಅವರು ಸಭೆ ಕರೆದರೆಂದರೆ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕಾದದ್ದು ಶಿಷ್ಠಾಚಾರ. ಆದರೆ ಕೊಡಗಿನಲ್ಲಿ ಸಂಸದರ ಪ್ರತಿ ಸಭೆಗೂ ಕೆಲ ಅಧಿಕಾರಿಗಳು ಗೈರು ಹಾಜರಾಗುವದನ್ನು ಕಂಡಾಗ ಸಂಸದರ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಗಳು ಸಮರ್ಪಕವಾಗಿ ಕಾರ್ಯಗತ ಗೊಳ್ಳದಿರುವದನ್ನು ಗಮನಿಸಿದಾಗ ಕೊಡಗಿನ ಅಭಿವೃದ್ಧಿ ಕೇವಲ ಸಭೆಯ ಕಾರ್ಯಸೂಚಿಗೆ ಮಾತ್ರ ಸೀಮಿತ ಎಂಬಂತಾಗಿದೆ ಅಧಿಕಾರಿಗಳೇ ಸಂಸದರ ಸಭೆಗೆ ಬನ್ನಿ ಎಂದು ಕೂಗಿ ಕರೆಯುವಂತಾಗಿದೆ.

-ಉಜ್ವಲ್ ರಂಜಿತ್