ಕುಶಾಲನಗರ/ ಕೂಡಿಗೆ, ಫೆ 11: ವಚನ ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತ ಜನತೆ ರಾಜ್ಯದಲ್ಲಿ ಪ್ರಾಂತೀಯ ಪಕ್ಷದ ಬಗ್ಗೆ ಒಲವು ತೋರಿದ್ದಾರೆ ಎಂದು ಜೆಡಿಎಸ್ ಮುಖಂಡರು, ಮಾಜಿ ಸಚಿವರಾದ ಹೆಚ್.ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕೂಡಿಗೆಯಲ್ಲಿ ಜಾತ್ಯಾತೀತ ಜನತಾದಳದ ಹೋಬಳಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಕಚ್ಚಾಟದಲ್ಲಿ ತೊಡಗಿರುವ ರಾಷ್ಟ್ರೀಯ ಪಕ್ಷಗಳು ಜನಸಾಮಾನ್ಯರ ಬಗ್ಗೆ ನಿರ್ಲಕ್ಷ್ಯ ತಾಳಿವೆ. ಪ್ರಾಂತೀಯ ಪಕ್ಷಗಳಿಂದ ದೇಶದಲ್ಲಿ ಅಭಿವೃದ್ಧಿ ಕಾಣುತ್ತಿದ್ದು ರಾಜಕೀಯ ಶಕ್ತಿ ಬಲಿಷ್ಟವಾದಲ್ಲಿ ಮಾತ್ರ ಭರವಸೆ ಈಡೇರಿಕೆ ಸಾಧ್ಯ ಎಂದರು.4 ಸಾವಿರ ಕೋಟಿ ರೂ. ಗಳ ಭಾಗ್ಯ ಯೋಜನೆ ಹಿಂದಿನ ಯೋಜನೆಗಳ ಮುಂದುವರಿಕೆ ಅಷ್ಟೆ ಹೊರತು ಹೊಸ ಯೋಜನೆಗಳಲ್ಲ ಎಂದರು. ಕರ್ನಾಟಕ ರಾಜ್ಯದ ಜನರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿರುವ

(ಮೊದಲ ಪುಟದಿಂದ) ಸರಕಾರ ತೆರಿಗೆ ಮೂಲಕ ಖಜಾನೆ ತುಂಬಿಸುವ ರೈತಾಪಿ ವರ್ಗಕ್ಕೆ ವಂಚನೆ ಮಾಡುತ್ತಿದೆ ಎಂದು ದೂರಿದರು.

ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ನಿರ್ವಹಿಸುವ ಮೂಲಕ ಪಕ್ಷ ಬಲಿಷ್ಠಗೊಳಿಸಿ ಮಡಿಕೇರಿ ಕ್ಷೇತ್ರದಲ್ಲಿ ಬಿ.ಎ. ಜೀವಿಜಯ ಮತ್ತು ವೀರಾಜಪೇಟೆ ಕ್ಷೇತ್ರದಿಂದ ಮೇರಿಯಂಡ ಸಂಕೇತ್ ಪೂವಯ್ಯ ಅವರುಗಳನ್ನು ವಿಜೇತರನ್ನಾಗಿ ಮಾಡುವ ಮೂಲಕ ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿಸುವಲ್ಲಿ ಶ್ರಮಿಸಬೇಕೆಂದರು.

ಮಾಜಿ ಸಚಿವರು ಹಾಗೂ ಮಡಿಕೇರಿ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ, ಕೊಡಗು ಜಿಲ್ಲೆಯಲ್ಲಿ ಬದಲಾವಣೆ ಸಮಯ ಸಮೀಪಿಸಿದ್ದು ರಾಜ್ಯದಲ್ಲಿ ಜೆಡಿಎಸ್ ಮೂಲಕ ಸ್ಥಿರ ಸರಕಾರದ ಪರಿಕಲ್ಪನೆಗೆ ನಾಂದಿಯಾಗಲಿದೆ ಎಂದರು.

ಜಿಲ್ಲಾಧ್ಯಕ್ಷರು ಹಾಗೂ ವೀರಾಜಪೇಟೆ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, 1980 ರ ದಶಕದಲ್ಲಿ ರಾಮಕೃಷ್ಣ ಹೆಗಡ್ಡೆ ಅವರ ಸರಕಾರದಲ್ಲಿ ರಾಜನೀತಿಜ್ಞರಾಗಿ ಕಾರ್ಯ ನಿರ್ವಹಿಸಿದ ಬಿ.ಎ.ಜೀವಿಜಯ ಅವರ ಗೆಲುವಿಗೆ ಎಲ್ಲರ ಶ್ರಮ ಅಗತ್ಯ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಜನರ ಭಾವನೆಗಳಿಗೆ ಬೆಲೆ ನೀಡುವ ಸರಕಾರದ ಅಗತ್ಯ ಇದ್ದು ಎಲ್ಲಾ ಹಂತಗಳಲ್ಲಿ ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.

ಕುಶಾಲನಗರ ಸಮೀಪ ಕೂಡಿಗೆಯಲ್ಲಿ ಸಮಾವೇಶ ನಡೆಯುವ ಮುನ್ನ ಕುಶಾಲನಗರ ತನಕ ಬೈಕ್‍ಗಳಲ್ಲಿ ಆಗಮಿಸಿದ ಕಾರ್ಯಕರ್ತರು ಪಕ್ಷದ ಪ್ರಮುಖರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಜೆಡಿಎಸ್ ಮುಖಂಡರಾದ ಎಸ್.ಎನ್.ರಾಜಾರಾವ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಕೆಎಂಬಿ ಗಣೇಶ್, ಸುರೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜಂಶೀರ್, ಮನೋಜ್ ಬೋಪಯ್ಯ, ಸತೀಶ್ ಜೋಯಪ್ಪ, ಜಾನಕಿ ವೆಂಕಟೇಶ್, ಶೇಷಾದ್ರಿ, ಎಸ್.ಎಂ.ಡಿಸಿಲ್ವ, ನಾಗಪ್ಪ, ಪುಷ್ಪ ರಾಜೇಶ್, ಜಿಲ್ಲಾ ಯುವ ಜನತದಾಳದ ಸಿ.ಎಲ್.ವಿಶ್ವ, ವಿರಾಜಪೇಟೆಯ ಮತೀನ್, ಸ್ಥಳೀಯ ಪ್ರಮುಖರಾದ ಬಿ.ಡಿ.ಅಣ್ಣಯ್ಯ, ಕೆ.ಕೆ.ಹೇಮಂತ್, ರಾಮಚಂದ್ರ ಇದ್ದರು. ಹೋಬಳಿ ಅಧ್ಯಕ್ಷ ಎಂ.ಎಸ್.ರಾಜೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ವಕ್ತಾರ ಕಾಂತರಾಜು ಪ್ರಾಸ್ತಾವಿಕ ನುಡಿಗಳಾಡಿದರು.