ಮಡಿಕೇರಿ ಫೆ.12 :ಕರ್ನಾಟಕ ಸಾಹಿತ್ಯ ಅಕಾಡೆಮಿ ಐದು ವಿನೂತನ ಯೋಜನೆಗಳನ್ನು ಹಮ್ಮಿಕೊಂಡಿದ್ದು, ‘ಬಂಗಾರದ ಎಲೆಗಳು’ ಯೋಜನೆಯಡಿ 1920 ರಿಂದ 2020ರವರೆಗಿನ ಒಂದು ಶತಮಾನದ ಅವಧಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಕಟವಾದ ಸಾಹಿತ್ಯ ಕೃತಿಗಳನ್ನು ಮತ್ತು ಅದರ ಮೂಲ ಲೇಖಕರ ಮಾಹಿತಿಯನ್ನು ದಾಖಲಿಸುವ ಮಹತ್ವದ ಕಾರ್ಯ ನಡೆಯಲಿದೆ ಎಂದು ಯೋಜನೆಯ ಕ್ಷೇತ್ರ ತಜ್ಞ ಟಿ.ಪಿ.ರಮೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಕೊಡಗು ಸೇರಿದಂತೆ ಮೈಸೂರು ವಿಭಾಗದ 8 ಜಿಲ್ಲೆಗಳಿಗೆ ಅನ್ವಯವಾಗುವಂತೆ ಒಂದು ಶತಮಾನದ ಅವಧಿಯಲ್ಲಿ ಆಯಾ ಜಿಲ್ಲೆಯ ಲೇಖಕರುಗಳು ಪ್ರಕಟಿಸಿದ ಪ್ರಮುಖ ಕೃತಿಗಳು, ಸ್ಮರಣ ಸಂಚಿಕೆಗಳು ಹಾಗೂ ವಿಶೇಷಾಂಕಗಳಲ್ಲಿ ಪ್ರಕಟಗೊಂಡ ಲೇಖನಗಳನ್ನು ದಾಖಲಿಸುವ ಕೆಲಸ ನಡೆಯಲಿದೆ ಎಂದರು.
ಬಂಗಾರದ ಎಲೆಗಳು ಯೋಜನೆಯನ್ನು ಕಾರ್ಯಗತಗೊಳಿಸಲು ರಾಜ್ಯದ 30 ಜಿಲ್ಲೆಗಳಿಗೂ ಕ್ಷೇತ್ರ ತಜ್ಞರುಗಳನ್ನು ಅಕಾಡೆಮಿ ನೇಮಿಸಿದೆ. ಕಳೆದ ಡಿ.7 ಮತ್ತು 8 ರಂದು ಬೆಂಗಳೂರಿನ ಕನ್ನಡ ಭವನದಲ್ಲಿ ಕ್ಷೇತ್ರ ತಜ್ಞರ ಸಮಾಲೋಚನಾ ಸಭೆÉ ಮತ್ತು ಕಾರ್ಯಾಗಾರದಲ್ಲಿ ಯೋಜನೆಯ ಜಾರಿಯ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆÉ ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ 1920 ರಿಂದ ಇಲ್ಲಿಯವರೆಗೆ ಪ್ರಕಟವಾಗಿರುವ ಸಾಹಿತ್ಯ ಕೃತಿಗಳನ್ನು ಅವುಗಳ ಲೇಖಕರ ವಿವರಗಳೊಂದಿಗೆ ದಾಖಲಿಸುವ ಸಲುವಾಗಿ ಜಿಲ್ಲೆಯ ಲೇಖಕರುಗಳು ತಮ್ಮ ಪ್ರಕಟಿತ ಕೃತಿಗಳನ್ನು ‘ಟಿ.ಪಿ. ರಮೇಶ್, ಕ್ಷೇತ್ರ ತಜ್ಞ, ಬಂಗಾರದ ಎಲೆಗಳು, ನಂ.8, ನಿರ್ಮಲ ನಿಲಯ, ಸಂತ ಜೋಸೆಫರ ಕಾನ್ವೆಂಟ್ ಬಳಿ, ಮಡಿಕೇರಿ-571201’ ಇಲ್ಲಿಗೆ ಕಳುಹಿಸಿಕೊಡುವಂತೆ ವಿನಂತಿದ ರಮೇಶ್, ಮಾಹಿತಿಗಾಗಿ ದೂ.9448422511 ನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಸಾಹಿತ್ಯ ಕೃತಿಗಳ ಬಗ್ಗೆ ಮಾಹಿತಿಯನ್ನು ಕಳುಹಿಸಿಕೊಡುವ ಸಂದರ್ಭ ಸಾಹಿತಿಯ ಪೂರ್ಣ ಹೆಸರು, ಭಾವಚಿತ್ರ, ಉಪನಾಮವಿದ್ದಲ್ಲಿ ಅದನ್ನು ನಮೂದಿಸಬೇಕು. ಹುಟ್ಟಿದ ಸ್ಥಳ, ಗ್ರಾಮ, ತಾಲೂಕು, ಜಿಲ್ಲೆ , ತಂದೆ - ತಾಯಿಯ ಹೆಸರು, ಹುಟ್ಟಿದ ದಿನಾಂಕ, ಲೇಖಕರು ತೀರಿಕೊಂಡಿದ್ದಲ್ಲಿ ನಿಧನರಾದ ದಿನಾಂಕ, ಅವರ ವಿದ್ಯಾಭ್ಯಾಸ, ಉದ್ಯೋಗದ ಮಾಹಿತಿಯನ್ನು ನಮೂದಿಸಬೇಕು. ಕೃಷಿಕ, ಶಿಕ್ಷಕ ಹುದ್ದೆಯ ಹೆಸರನ್ನು ನಮೂದಿಸುವದು ಬೇಡವೆಂದ ರಮೇಶ್, ಪುಸ್ತಕದ ಮೊದಲ ಮುದ್ರಣದ ವರ್ಷ ಲಭ್ಯವಿದ್ದರೆÀ ಅದನ್ನು ನಮೂದಿಸಬೇಕು. ಲೇಖಕರಿಗೆ ಸಂದ ಪ್ರಶಸ್ತಿಗಳು, ಇತರ ಸಾಹಿತ್ಯಿಕ ಚಟುವಟಿಕೆಗಳನ್ನು ನಮೂದಿಸಬೇಕೆಂದು ವಿವರಗಳನ್ನು ನೀಡಿದರು.
ಚಕೋರ ಯೋಜನೆ: ಅಕಾಡೆಮಿಯ ಮಹತ್ವದ ಯೋಜನೆಗಳಲ್ಲಿ ಒಂದಾದ ‘ಚಕೋರ ಯೋಜನೆ’ಯಡಿ ಆಯಾ ಜಿಲ್ಲೆಯ 30 ಮಂದಿ ಲೇಖಕರ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗುತ್ತದೆ ಮತ್ತು ಈ ವೇದಿಕೆಯ ಮೂಲಕ ಪ್ರತಿ ತಿಂಗಳು ಕವಿ -ಕಾವ್ಯ ವಿಮರ್ಶೆ, ಸಂವಾದ, ಇಬ್ಬರು ಕವಿಗಳ ಮುಖಾಮುಖಿ, ಕವಿ ಮತ್ತು ವಿಮರ್ಶಕರ ಮುಖಾಮುಖಿ ಹೀಗೆ ಕಾವ್ಯ ವಿಮರ್ಶೆ ಕೇಂದ್ರಿತವಾದ ಸಾಹಿತ್ಯ ಕಾರ್ಯಕ್ರಗಳನ್ನು ಆಯೋಜಿಸಲಾಗುತ್ತದೆ. ಯುವ ಬರಹಗಾರರನ್ನು ಸಾಹಿತ್ಯ ಕ್ಷೇತ್ರಕ್ಕೆ ಆಕರ್ಷಿಸುವ ಉದ್ದೇಶದಿಂದ ಅಕಾಡೆಮಿ ‘ಯುವ ಕಾವ್ಯಾಭಿಯಾನ ಯೋಜನೆ’ಯನ್ನು ಹಮ್ಮಿಕೊಂಡಿದ್ದು, ಈ ಯೋಜನೆಯಡಿ ರಾಜ್ಯದ 15 ಭಾಗಗಳಲ್ಲಿ ಕಮ್ಮಟ ನಡೆಯಲಿದೆ. ಪ್ರತಿಯೊಂದು ಭಾಗದ ಕಮ್ಮಟ ಎರಡು ಜಿಲ್ಲೆಗಳನ್ನು ಒಳಗೊಂಡಿರುತ್ತದೆ ಮತ್ತು ಕಮ್ಮಟದಲ್ಲಿ 100 ರಿಂದ 150 ಮಂದಿ ಯುವ ಜನರನ್ನು ಆಯ್ಕೆ ಮಾಡಲಾಗುತ್ತದೆ ಎಂದು ರಮೇಶ್ ಮಾಹಿತಿ ನೀಡಿದರು.
ಐದು ಯೋಜನೆಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಂಗಾರದ ಎಲೆಗಳು, ಚಕೋರ ಯೋಜನೆ, ಯುವ ಕಾವ್ಯಾಭಿಯಾನ ಯೋಜನೆ ಒಳಗೊಂಡಂತೆ ‘ವಜ್ರದ ಬೇರುಗಳು’ ಯೋಜನೆಯ ಕನ್ನಡ ಸಾಹಿತ್ಯ ಪ್ರ್ರಾಕಾರಗಳ ಮಾಲಿಕೆ, ದಲಿತ ಕ್ರೈಸ್ತ ಸಾಂಸ್ಕøತಿಕ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.