ಗುಡ್ಡೆಹೊಸೂರು, ಫೆ. 12: ಇಲ್ಲಿಗೆ ಸಮೀಪದ ಮರೂರಿನಲ್ಲಿ ನೂತನವಾಗಿ ನಿರ್ಮಿಸಿದ ಈಶ್ವರ ದೇವಸ್ಥಾನದ ಉಧ್ಘಾಟನೆ ವಿಜೃಂಭಣೆಯಿಂದ ನೆರವೇರಿತು. ಮಂಜಾನೆ 4 ಗಂಟೆಯಿಂದಲೆ ದೇವಸ್ಥಾನದ ಆವರಣದಲ್ಲಿ ವಿವಿಧ ಪೂಜಾಕಾರ್ಯಗಳು ನಡೆದವು. ಮುಂಜಾನೆ 5 ಗಂಟೆಗೆ ಸರ್ವ ಗ್ರಾಮಸ್ಥರು ಸೇರಿ ಕಾವೇರಿ ನದಿಯಲ್ಲಿ ಗಂಗಾ ಪೂಜೆ ನಡೆಸಿ ವೀರಗಾಸೆ ನೃತ್ಯದೊಂದಿಗೆ ಗ್ರಾಮದ ಮಹಿಳೆಯರು ಪೂರ್ಣಕುಂಭ ಕಳಸಹೊತ್ತು ದೇವಸ್ಥಾನಕ್ಕೆ ಆಗಮಿಸಿ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂಜಾಕಾರ್ಯವನ್ನು ನಡೆಸಲಾಯಿತು. ಈ ಸಂದರ್ಭ ಶಿವಲಿಂಗ ಮತ್ತು ಗಣೇಶ, ಸುಬ್ರಹ್ಮಣ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಗ್ರಾಮದ ಪ್ರತಿ ಮನೆಯ ಮುಂದೆ ಹಸಿರು ತೋರಣ ರಾರಾಜಿಸುತ್ತಿದ್ದವು. ಸುತ್ತಮುತ್ತಲಿನ ಗ್ರಾಮದ ಸಾವಿರಾರು ಮಂದಿ ಆಗಮಿಸಿ ದೇವರ ದರ್ಶನ ಪಡೆದರು. ದಿನವಿಡೀ ಅನ್ನಸಂತರ್ಪಣೆ ಕಾರ್ಯ ನಡೆಯಿತು. ದೇವಸ್ಥಾನ ಆಡಳಿತ ಮಂಡಳಿಯವರು ಸಕ್ರಿಯವಾಗಿ ಭಾಗವಹಿಸಿದ್ದರು.